ನವದೆಹಲಿ:ಕನ್ವರ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆಯನ್ನು ಅಂಗಡಿಗಳ ಹೊರಗೆ ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರಪ್ರದೇಶ ಸರ್ಕಾರ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದೆ.
ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿಗಳಲ್ಲಿ ತಿಂಡಿ - ತಿನಿಸುಗಳ ಹೆಸರನ್ನು ಪ್ರದರ್ಶಿಸಬಹುದು. ಮಾಲೀಕರ ಹೆಸರು, ಅವರ ವಿವರಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ. ಉತ್ತರಾಖಂಡ ಮತ್ತು ಮಧ್ಯಪ್ರದೇಶವೂ ಹೊರಡಿಸಿದ ಇದೇ ರೀತಿಯ ನಿರ್ದೇಶನಗಳನ್ನು ತಡೆಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ. ಎನ್ ಭಟ್ಟಿ ಅವರಿದ್ದ ಪೀಠವು, ಯಾತ್ರೆಯ ಉದ್ದಕ್ಕೂ ರಸ್ತೆಯಲ್ಲಿರುವ ಅಂಗಡಿಗಳು ತಮ್ಮ ಮಾಲೀಕರ ಬಗ್ಗೆ ವಿವರ ನೀಡುವ ಅಗತ್ಯ ಕಾಣಿಸುತ್ತಿಲ್ಲ. ಹೀಗಾಗಿ ಈ ನಿಯಮವನ್ನು ಜಾರಿ ಮಾಡುವುದನ್ನೇ ನಿಷೇಧಿಸುವ ಮಧ್ಯಂತರ ಆದೇಶವನ್ನು ಹೊರಡಿಸುವುದು ಸೂಕ್ತವೆಂದು ಭಾವಿಸುತ್ತೇವೆ. ಢಾಬಾ ಮಾಲೀಕರು ಸೇರಿದಂತೆ ಹಣ್ಣು ಮಾರಾಟಗಾರರು, ಚಿಲ್ಲರೆ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮತ್ತಿತರ ಅಂಗಡಿಗಳು ಕನ್ವಾರಿಯಾಗಳಿಗೆ ನೀಡುವ ಆಹಾರದ ಬಗ್ಗ ಮಾಹಿತಿ ಫಲಕ ಹಾಕುವುದು ಉತ್ತಮ. ಮಾಲೀಕರು ಅಥವಾ ಸಿಬ್ಬಂದಿಯ ಹೆಸರು ಮತ್ತು ಗುರುತುಗಳನ್ನು ಬಹಿರಂಗಪಡಿಸಲು ಅವರನ್ನು ಬಲವಂತಪಡಿಸಬಾರದು ಎಂದು ಅಭಿಪ್ರಾಯಪಟ್ಟಿತು.
ಸರ್ಕಾರದ ಉದ್ದೇಶ, ಯಾತ್ರಿಕರಿಗೆ ಕೇವಲ ಸಸ್ಯಾಹಾರ ನೀಡುವುದನ್ನು ಮಾತ್ರ ಹೊಂದಿದ್ದರೆ, ಇದು ಒಂದು ಕೋಮಿನ ವಿರುದ್ಧದ ಕ್ರಮ ಎಂದು ಭಾವಿಸಬಹುದು. ಇದು ಸಾಂವಿಧಾನಿಕ ಮತ್ತು ಕಾನೂನು ಮಾನದಂಡಗಳಿಗೆ ವಿರುದ್ಧವಾಗಿದೆ. ಈ ಆದೇಶ ತಾರತಮ್ಯದಿಂದ ಕೂಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಮಾಲೀಕರ ಹೆಸರು, ವಿಳಾಸ, ಅವರ ಸಿಬ್ಬಂದಿಯನ್ನು ಬಹಿರಂಗಪಡಿಸಲು ಸೂಚಿಸಿರುವುದು ಹಿಂದಿನ ಉದ್ದೇಶ ಸರಿಯಿಲ್ಲ ಎಂದು ತೀವ್ರವಾಗಿ ಖಂಡಿಸಿದರು.