ಕರ್ನಾಟಕ

karnataka

ETV Bharat / bharat

'ಇಬ್ಬರು ಮಹಿಳೆಯರಿಂದ ಸ್ವಯಂಪ್ರೇರಿತ ಆಶ್ರಮ ವಾಸ': ಈಶಾ ಪ್ರಕರಣದ ವಿಚಾರಣೆ ಮುಕ್ತಾಯ, ಸದ್ಗುರು ನಿರಾಳ - JAGGI VASUDEV

ಈಶಾ ಫೌಂಡೇಶನ್ ವಿರುದ್ಧ ದಾಖಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಮುಕ್ತಾಯಗೊಳಿಸಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (IANS)

By PTI

Published : Oct 18, 2024, 6:49 PM IST

ನವದೆಹಲಿ: ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ವಿರುದ್ಧ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ.

ಕೊಯಮತ್ತೂರಿನ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಆವರಣದಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬಂಧಿಯಾಗಿರಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಇಬ್ಬರೂ ಮಹಿಳೆಯರು ಪ್ರೌಢ ವಯಸ್ಕರಾಗಿದ್ದು, ತಾವು ಸ್ವಯಂಪ್ರೇರಿತವಾಗಿ ಮತ್ತು ಯಾವುದೇ ಬಲವಂತವಿಲ್ಲದೆ ಆಶ್ರಮದಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿತು.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು ಅಕ್ಟೋಬರ್ 3ರ ಆದೇಶಕ್ಕೆ ಅನುಸಾರವಾಗಿ, ಪೊಲೀಸರು ತನ್ನ ಮುಂದೆ ಸ್ಥಿತಿಗತಿ ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿತು. ಅಲ್ಲದೆ, ಆರಂಭದಲ್ಲಿ ಮದ್ರಾಸ್ ಹೈಕೋರ್ಟ್​ನಲ್ಲಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯಿಂದ ಉದ್ಭವಿಸುವ ಈ ಪ್ರಕ್ರಿಯೆಗಳ ವ್ಯಾಪ್ತಿಯನ್ನು ವಿಸ್ತರಿಸುವುದು ಅನಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಕ್ಟೋಬರ್ 3ರಂದು, ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್​ನ ಆಶ್ರಮದಲ್ಲಿ ಇಬ್ಬರು ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿಟ್ಟ ಆರೋಪದ ಬಗ್ಗೆ ತನಿಖೆ ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ ನಿರ್ಬಂಧ ವಿಧಿಸಿತ್ತು. ಹೈಕೋರ್ಟ್​ನಲ್ಲಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂ ಕೋರ್ಟ್, ಮಹಿಳೆಯರ ಅಕ್ರಮ ಬಂಧನದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಫೌಂಡೇಶನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ನಿರ್ದೇಶನ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಈಶಾ ಫೌಂಡೇಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೆಣ್ಣು ಮಕ್ಕಳಿಬ್ಬರೂ ಸ್ವ ಇಚ್ಛೆಯಿಂದ ಆಶ್ರಮದಲ್ಲಿ ಇರುವುದಾಗಿ ಹೇಳಿದ್ದರಿಂದ ವಿಚಾರಣೆಯನ್ನು ಮುಕ್ತಾಯಗೊಳಿಸಿ ಆದೇಶಿಸಿದೆ. ಅಲ್ಲದೆ, "ಯಾವುದೇ ಕಾನೂನಾತ್ಮಕ ಅವಶ್ಯಕತೆಗಳನ್ನು ಕಾನೂನಿಗೆ ಅನುಗುಣವಾಗಿ ಸಂಸ್ಥೆಯಿಂದ ಸೂಕ್ತವಾಗಿ ಪೂರೈಸಲಾಗುವುದು" ಎಂದು ಈಶಾ ಪರವಾಗಿ ವಕೀಲ ರೋಹಟಗಿ ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.

ಇದನ್ನೂ ಓದಿ : ಧರ್ಮ ಮರೆಮಾಚಿ ಪ್ರೀತಿಯ ನಾಟಕವಾಡಿ ಅತ್ಯಾಚಾರ ಆರೋಪ: ಯುವತಿಯಿಂದ ದೂರು

ABOUT THE AUTHOR

...view details