ನವದೆಹಲಿ: ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವುದನ್ನು ತಪ್ಪಿಸಲು ಆಧಾರ್ ಕಾಯ್ದೆಯಂಥ ಮಸೂದೆಗಳನ್ನು ಹಣಕಾಸು ಮಸೂದೆ ಎಂದು ಅನುಮೋದನೆ ಮಾಡುವ ಪ್ರಕ್ರಿಯೆಯ ಸಿಂಧುತ್ವವನ್ನು ಪರಿಶೀಲಿಸಲು ಸಾಂವಿಧಾನಿಕ ಪೀಠ ರಚಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮುಖ್ಯಸ್ಥರೂ ಆಗಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮನವಿಗಳು ಪೂರ್ಣಗೊಂಡಿವೆ ಮತ್ತು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಒತ್ತಾಯಿಸಿದರು.
"ನಾನು ಸಂವಿಧಾನ ಪೀಠ ರಚಿಸಿದ ನಂತರ ಈ ಬಗ್ಗೆ ವಿಚಾರಣೆ ನಡೆಸುತ್ತೇನೆ" ಎಂದು ಸಿಜೆಐ ಹೇಳಿದರು. ಆಧಾರ್ ಕಾಯ್ದೆಯಂತಹ ಕಾನೂನುಗಳನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿರುವುದರ ಸಿಂಧುತ್ವದ ವಿಷಯವನ್ನು ಪರಿಗಣಿಸಲು ಏಳು ನ್ಯಾಯಾಧೀಶರ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು.
ಆಧಾರ್ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಗೆ (ಪಿಎಂಎಲ್ಎ) ತಿದ್ದುಪಡಿಗಳನ್ನು ಹಣಕಾಸು ಮಸೂದೆಗಳಾಗಿ ಸರ್ಕಾರ ಅನುಮೋದನೆ ಪಡೆದುಕೊಂಡ ನಂತರ ಹುಟ್ಟಿಕೊಂಡ ವಿವಾದವನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ರಚಿಸಲು ಮುಂದಾಗಿದೆ.
ಹಣಕಾಸು ಮಸೂದೆಯು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದಾದ ಮಸೂದೆಯಾಗಿರುತ್ತದೆ ಮತ್ತು ರಾಜ್ಯಸಭೆ ಅದನ್ನು ತಿದ್ದುಪಡಿ ಮಾಡಲು ಅಥವಾ ತಿರಸ್ಕರಿಸಲು ಸಾಧ್ಯವಿಲ್ಲ. ಮೇಲ್ಮನೆಯು ಶಿಫಾರಸುಗಳನ್ನು ಮಾತ್ರ ಮಾಡಬಹುದು ಮತ್ತು ಈ ಶಿಫಾರಸುಗಳನ್ನು ಕೆಳಮನೆ ಅಂದರೆ ಲೋಕಸಭೆಯು ಒಪ್ಪಬಹುದು ಅಥವಾ ಒಪ್ಪದಿರಬಹುದು.
ಮೊಹಲ್ಲಾ ಬಸ್ ಸೇವೆಯ ಪ್ರಾಯೋಗಿಕ ಸಂಚಾರ ಆರಂಭ: ನವದೆಹಲಿ: ದೆಹಲಿ ಸರ್ಕಾರದ ಮೊಹಲ್ಲಾ ಬಸ್ ಸೇವೆಯ ಪ್ರಾಯೋಗಿಕ ಸಂಚಾರ ಸೋಮವಾರ ಎರಡು ಮಾರ್ಗಗಳಲ್ಲಿ ಪ್ರಾರಂಭವಾಗಿದೆ ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ 2,080 ಬಸ್ ಗಳು ಸಂಚರಿಸಲಿವೆ. ಇವುಗಳಲ್ಲಿ 1,040 ಅನ್ನು ಡಿಟಿಸಿ ಮತ್ತು ಉಳಿದವುಗಳನ್ನು ಡಿಐಎಂಟಿಎಸ್ ನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.
ಮಜ್ಲಿಸ್ ಪಾರ್ಕ್ ನಿಂದ ಪ್ರಧಾನ್ ಎನ್ ಕ್ಲೇವ್ ಮತ್ತು ಅಕ್ಷರಧಾಮದಿಂದ ಮಯೂರ್ ವಿಹಾರ್ ಹಂತ 3 ರಲ್ಲಿ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಿದೆ. ಪ್ರಯೋಗವು ಒಂದು ವಾರದವರೆಗೆ ಮುಂದುವರಿಯಲಿದೆ ಮತ್ತು ಕಲಿಕೆ ಹಾಗೂ ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ಎರಡು ಮೂರು ವಾರಗಳಲ್ಲಿ ಯೋಜನೆಯನ್ನು ಪೂರ್ಣರೂಪದಲ್ಲಿ ಆರಂಭಿಸಲಿದ್ದೇವೆ ಎಂದು ಅವರು ಹೇಳಿದರು. ಈ ಬಸ್ ಸೇವೆಯು ರಾಷ್ಟ್ರ ರಾಜಧಾನಿಯಲ್ಲಿ ಸಂಪರ್ಕದ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಗೆಹ್ಲೋಟ್ ತಿಳಿಸಿದರು.
ಇದನ್ನೂ ಓದಿ : ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಚೀನಾ ವ್ಯವಹಾರಗಳ ತಜ್ಞ ವಿಕ್ರಮ ಮಿಸ್ರಿ ನೇಮಕ - new foreign secretary