ಅಲಿಗಢ (ಉತ್ತರಪ್ರದೇಶ) : ಉತ್ತರಪ್ರದೇಶದ ಅಲಿಗಢದಲ್ಲಿ ಗೋಹತ್ಯೆಕೋರರನ್ನು ಬಂಧಿಸಲು ತೆರಳಿದ್ದ ಪೊಲೀಸ್ ತಂಡಕ್ಕೆ ಅವಘಡ ಸಂಭವಿಸಿದೆ. ಪಿಸ್ತೂಲ್‌ನಿಂದ ಗುಂಡೊಂದು ಹಾರಿ ಇನ್ಸ್‌ಪೆಕ್ಟರ್‌ನ ಹೊಟ್ಟೆಯನ್ನು ಸೀಳಿ, ನೇರವಾಗಿ ಎಸ್‌ಒಜಿ ಕಾನ್ಸ್ಟೇಬಲ್ನ ತಲೆಗೆ ಹೊಕ್ಕಿದೆ.
ಇದರಿಂದ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ಸ್‌ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಎಸ್‌ಎಸ್‌ಪಿ ಸಂಜೀವ್ ಸುಮನ್ ಅವರು ಮಾತನಾಡಿ, ಎಸ್‌ಒಜಿ ಜಂಟಿ ತಂಡ ಗೋ ಹತ್ಯೆಕೋರರ ಹುಡುಕಾಟಕ್ಕೆ ತೆರಳಿದೆ ಎಂದು ಹೇಳಿದ್ದಾರೆ.
ಗೋಹತ್ಯೆ ಆರೋಪಿಗಳ ಪತ್ತೆಗಾಗಿ ಗಾಂಧಿ ಪಾರ್ಕ್, ಗಭಾನಾ ಮತ್ತು ಎಸ್‌ಒಜಿ ಪೊಲೀಸ್ ಠಾಣೆಯ ಜಂಟಿ ತಂಡ ದಾಳಿ ನಡೆಸಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ದಾಳಿ ವೇಳೆ ಸಬ್ ಇನ್ಸ್‌ಪೆಕ್ಟರ್ ಮಜರ್ ಹಸನ್ ಅವರ ಪಿಸ್ತೂಲ್ ಲಾಕ್ ಆಗಿದೆ. ಆಗ ಮತ್ತೋರ್ವ ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ಅವರು ಅದನ್ನು ಅನ್‌ಲಾಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಇದ್ದಕ್ಕಿದ್ದಂತೆ ಪಿಸ್ತೂಲ್‌ನಿಂದ ಗುಂಡು ಹಾರಿದೆ. ಅದು ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ಅವರ ಹೊಟ್ಟೆಗೆ ತಗುಲಿ, ಪಕ್ಕದಲ್ಲಿ ನಿಂತಿದ್ದ ಹೆಡ್ಕಾನ್ಸ್ಟೇಬಲ್ ಯಾಕೂಬ್ (ಎಸ್‌ಒಜಿ) ತಲೆಗೆ ತಗುಲಿದೆ.
ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಹೆಡ್ ಕಾನ್ಸ್ಟೇಬಲ್ ಯಾಕೂಬ್ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
''ಜುಲೈ 8 - 9 ರ ರಾತ್ರಿ ಗೋಹತ್ಯೆ ನಡೆಸಿದವರು ಗಭಾನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಕ್ರಮ ಕೈಗೊಳ್ಳಲು ಗಭಾನಾ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಎಸ್‌ಒಜಿ ತಂಡ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ, ಎಲ್ಲರಿಗೂ ಪಿಸ್ತೂಲ್ ಲೋಡ್ ಮಾಡಲು ಹೇಳಲಾಯಿತು. ಸಬ್ ಇನ್ಸ್‌ಪೆಕ್ಟರ್ ಮಜಾರ್ ಹುಸೇನ್ ಅವರ ಪಿಸ್ತೂಲ್ ಲೋಡ್ ಮಾಡುವಾಗ ಲಾಕ್ ಆಯಿತು. ಅವರು ಅದನ್ನು ಸರಿಪಡಿಸುವಂತೆ ನನ್ನ ಕೈಗೆ ಪಿಸ್ತೂಲ್ ನೀಡಿದರು. ನಾನು ಪಿಸ್ತೂಲ್ ಅನ್ನು ಸರಿಪಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡು ಹಾರಿತು. ಅದು ನನ್ನ ಹೊಟ್ಟೆಗೆ ತಾಗಿ ಹೆಡ್ ಕಾನ್ಸ್ಟೇಬಲ್ ಯಾಕೂಬ್‌ಗೆ ಹೊಡೆದಿದೆ'' ಎಂದು ಸಬ್ ಇನ್ಸ್‌ಪೆಕ್ಟರ್ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ :ಲೂಧಿಯಾನ ಎಸ್‌ಎಸ್‌ಪಿ ಕಚೇರಿಯಲ್ಲಿ ಅಹಿತಕರ ಘಟನೆ: ಡಿಎಸ್‌ಪಿ ಅವರ ಗನ್‌ಮ್ಯಾನ್ ಬುಲೆಟ್ ಗಾಯದಿಂದ ಸಾವು