ಕರ್ನಾಟಕ

karnataka

ETV Bharat / bharat

ಕೋಟಾದಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ: ಈ ವರ್ಷದ ಎರಡನೇ ಪ್ರಕರಣ

ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟಾದಲ್ಲಿ ನಡೆದಿದೆ.

ಕೋಟಾದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಕೋಟಾದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

By ETV Bharat Karnataka Team

Published : Jan 29, 2024, 10:22 PM IST

ಕೋಟಾ:ಕೋಚಿಂಗ್ ಹಬ್ ಎಂದೇ ಖ್ಯಾತಿ ಪಡೆದಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಇಂದು ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಲ್ಲಿಯ ಬೋರ್ಖೇಡಾ ಎಂಬಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸಿದ್ದ 18 ವರ್ಷದ ನಿಹಾರಿಕಾ ಎಂಬ ವಿದ್ಯಾರ್ಥಿನಿ ಜೆಇಇ ಮುಖ್ಯ​ ಪರೀಕ್ಷೆ (ಜ.31)ಗೆ ಎರಡು ದಿನಗಳ ಬಾಕಿ ಇರುವ ಮುನ್ನವೇ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೋಟಾದ ಬೋರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮನ್ಪುರದಲ್ಲಿ ನಿಹಾರಿಕಾ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಸ್ವಂತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಡೆತ್​ನೋಟ್​ ಬರೆದಿಟ್ಟಿರುವುದು ಪತ್ತೆಯಾಗಿದೆ. ಪ್ರಕರಣದ ಬಗ್ಗೆ ಪೊಲೀಸ್​ ಅಧಿಕಾರಿ ಜಿತೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದ್ದು, ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ. ಮೃತ ವಿದ್ಯಾರ್ಥಿನಿ ನಿಹಾರಿಕಾ ಸಿಂಗ್ ಅವರ ಕುಟುಂಬ ಸದಸ್ಯರ ಪ್ರಕಾರ, ಅವರು ಜೆಇಇ ಮುಖ್ಯ ಪರೀಕ್ಷೆಯ ತಯಾರಿ ನಡೆಸಿದ್ದರು. ಹಲವು ದಿನಗಳಿಂದ ವಿದ್ಯಾರ್ಥಿನಿ ಒತ್ತಡದಲ್ಲಿದ್ದಳು ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿ ಬರೆದಿರುವ ಡೆತ್​ನೋಟ್​ ಕೂಡ ಪತ್ತೆಯಾಗಿದೆ. ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಶೇಖಾವತ್​ ತಿಳಿಸಿದ್ದಾರೆ.

ನಿಹಾರಿಕಾ ಆನ್‌ಲೈನ್ ಮೂಲಕ ತರಬೇತಿ ಪಡೆಯುತ್ತಿದ್ದಳು ಎಂದು ಮೃತಳ ಸೋದರ ಸಂಬಂಧಿ ವಿಕ್ರಮ್ ಸಿಂಗ್ ಹೇಳಿದ್ದಾರೆ. ಅವಳು ಓದುವುದರಲ್ಲಿ ತುಂಬಾ ಮುಂದಿದ್ದಳು. ಜೆಇಇ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸಿದ್ದಳು. ಅಲ್ಲದೇ ಜ.31ಕ್ಕೆ ಜೆಇಇ ಮುಖ್ಯ ಪರೀಕ್ಷೆ ಇತ್ತು. ಈ ವಿಷಯದಲ್ಲಿ ಅವಳು ನಿರಂತರವಾಗಿ ಒತ್ತಡದಲ್ಲಿದ್ದಳು. ಅವಳು ಸುಮಾರು 6 ರಿಂದ 7 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದಳು. ಆದರೆ, ವಿದ್ಯಾರ್ಥಿನಿ ತನ್ನ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನಮ್ಮ ಮುಂದೆ ಈ ಬಗ್ಗೆ ತಿಳಿಸಿದ್ದರೆ ಬಹುಶಃ ಅವಳ ಸಮಸ್ಯೆಗೆ ಪರಿಹಾರವನ್ನು ಹುಡುಕುವಲ್ಲಿ ನಾವು ಒಟ್ಟಿಗೆ ಇರುತ್ತಿದ್ದೆವು ಎಂದು ಅವಳ ಸಹೋದರ ತಿಳಿಸಿದ್ದಾರೆ.

ಕಳೆದ ವರ್ಷ 2023ರಲ್ಲಿ ಕೋಟಾದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಪರೀಕ್ಷೆ ಸೇರಿದಂತೆ ಇತರ ಒತ್ತಡಗಳಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಈ ವರ್ಷದಲ್ಲಿ ಇದು ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ. ಇದಕ್ಕೂ ಮುನ್ನ ಜನವರಿ 24, 2024 ರಂದು ಪರೀಕ್ಷೆಯ ಭಯದಿಂದ ನೀಟ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ:ಕಾನ್ಪುರ ಐಐಟಿಯಲ್ಲಿ ಪಿಹೆಚ್​ಡಿ ವಿದ್ಯಾರ್ಥಿನಿ ಆತ್ಮಹತ್ಯೆ: 2 ತಿಂಗಳಲ್ಲಿ ಮೂರನೇ ಪ್ರಕರಣ

ABOUT THE AUTHOR

...view details