ಶ್ರೀನಗರ: ಕಾಶ್ಮೀರದಲ್ಲಿ ಭಾರೀ ಹಿಮಪಾತ ಉಂಟಾಗಿದ್ದು, ಹಲವು ಪ್ರವಾಸಿಗರ ವಾಹನಗಳು ಹಿಮದಲ್ಲಿ ಸಿಲುಕಿಕೊಂಡಿವೆ. ಹಿಮಪಾತದಿಂದ ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿ ಸಿಲುಕಿರುವ ಪ್ರವಾಸಿಗರು ಪ್ರಾಣ ರಕ್ಷಣೆಗಾಗಿ ಮಸೀದಿಗಳ ಬಾಗಿಲು ತಟ್ಟಿದ್ದಾರೆ. ಅಲ್ಲಿಯೇ ಆಶ್ರಯ ಪಡೆದಿದ್ದಾರೆ.
ಪಂಜಾಬ್‌ನ 12 ಪ್ರವಾಸಿಗರು ಶುಕ್ರವಾರ ಸೋನಾಮಾರ್ಗ್ ಪ್ರದೇಶದಿಂದ ಹಿಂದಿರುಗುತ್ತಿದ್ದಾಗ ಹಿಮಪಾತದಲ್ಲಿ ಸಿಲುಕಿದ್ದು, ಗುಂಡ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ ಅವರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಮದ ರಾಶಿ ಬೀಳುತ್ತಿದ್ದು, ಪ್ರವಾಸಿಗರ ವಾಹನಗಳು ಹಿಮದಲ್ಲಿ ಸಿಲುಕಿಕೊಳ್ಳುತ್ತಿವೆ. ಪಂಜಾಬ್ ಪ್ರವಾಸಿಗರ ವಾಹನವೂ ಸಿಲುಕಿದ್ದು, ರಕ್ಷಣೆಗಾಗಿ ಹತ್ತಿರದ ಹೋಟೆಲ್ ಮತ್ತು ಮನೆಗಳಿಗಾಗಿ ಪರದಾಡಿದ್ದಾರೆ. ಆದರೆ, ಅಷ್ಟು ಪ್ರವಾಸಿಗರಿಗೆ ಹೊಂದಿಕೆಯಾಗದ್ದರಿಂದ ಮಸೀದಿಯಲ್ಲಿ ಅವಕಾಶ ಮಾಡಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಮಸೀದಿಯು ಗಗಾಂಗೀರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸ್ಥಳದಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಬೆಚ್ಚಗಿದ್ದು, ಪ್ರವಾಸಿಗರ ರಕ್ಷಣೆಗೆ ಸೂಕ್ತ ಸ್ಥಳ" ಎಂದು ಸ್ಥಳೀಯ ನಿವಾಸಿ ಬಶೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಪ್ರವಾಸಿಗರು ಮಸೀದಿಗಳ ಆಶ್ರಯ ಪಡೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಥಳೀಯರ ನೆರವಿಗಾಗಿ ಹಲವು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. "ನಾವು ಹಿಮದಲ್ಲಿ ಸಿಲುಕಿಕೊಂಡಾಗ ನಮ್ಮ ರಕ್ಷಣೆಗೆ ಬಂದಿದ್ದೀರಿ. ನಿಮಗೆಲ್ಲರಿಗೂ ಕೃತಜ್ಞತೆ" ಎಂದು ಪ್ರವಾಸಿಗನೊಬ್ಬ ಎಕ್ಸ್ ಖಾತೆ ಮೂಲಕ ಧನ್ಯವಾದ ಸಲ್ಲಿಸಿದ್ದಾನೆ.
"ಪ್ರತಿಯೊಬ್ಬರೂ ಕಾಶ್ಮೀರದ ಸೌಂದರ್ಯವನ್ನು ಸವಿಯಲೇಬೇಕು. ಅದರ ಆತಿಥ್ಯವನ್ನು ಅನುಭವಿಸಲು ಒಮ್ಮೆ ಭೇಟಿ ನೀಡಿ. ಇಲ್ಲಿ ಎಲ್ಲರೂ ಪ್ರೀತಿಯಿಂದ ಕಾಣುವವರಿದ್ದಾರೆ. ಸದ್ಯ ಕಾಶ್ಮೀರ ಭೇಟಿಗೆ ಸುರಕ್ಷಿತ. ದಯವಿಟ್ಟು ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಬನ್ನಿ" ಎಂದು ಮತ್ತೊಬ್ಬ ಪ್ರವಾಸಿಗ ಕಾಶ್ಮೀರದ ಸೊಬಗನ್ನು ಬಣ್ಣಿಸಿದ್ದಾರೆ.
ಹುರಿಯತ್ ಕಾನ್ಫರೆನ್ಸ್ ಚೇರ್ಮನ್ ಮಿರ್ವೈಜ್ ಉಮರ್ ಫಾರೂಕ್ ಅವರು ಈ ಅಭಿಪ್ರಾಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರೀ ಹಿಮಪಾತದ ನಡುವೆ ಕಾಶ್ಮೀರಿಗಳು ತಮ್ಮ ಮಸೀದಿ ಮತ್ತು ಮನೆಗಳಲ್ಲಿ ಆಶ್ರಯ ಪಡೆದಿರುವ ಪ್ರವಾಸಿಗರನ್ನು ನೋಡುವುದು ಸಂತೋಷ ಅನ್ನಿಸುತ್ತದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಗುಲ್ಮಾರ್ಗ್ ಜಿಲ್ಲೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ಸ್ಥಳಾಂತರ ಮಾಡಿರುವುದಾಗಿ ಭಾರತೀಯ ಸೇನೆಯ ಚಿನಾರ್ ವಾರಿಯರ್ಸ್ ಕಾರ್ಪ್ಸ್ ತಿಳಿಸಿದೆ. ಹಿಮಪಾತದಿಂದ ತನ್ಮಾರ್ಗ್‌ಗೆ ರಸ್ತೆಯನ್ನು ಮುಚ್ಚಿದ್ದು, ಗುಲ್ಮಾರ್ಗ್ ಜಿಲ್ಲೆಯಲ್ಲಿ 30 ಮಹಿಳೆಯರು, 30 ಪುರುಷರು ಮತ್ತು 8 ಮಕ್ಕಳು ಸೇರಿದಂತೆ 68 ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಇವರು ಸೇರಿ ಒಟ್ಟು 137 ಪ್ರವಾಸಿಗರಿಗೆ ಊಟ, ವಸತಿ ಮತ್ತು ಔಷಧೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಪ್ಸ್ ಹೇಳಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಸೆಂಬರ್ 30ರ ವರೆಗೆ ಲಘು ಮಳೆ ಮತ್ತು ಹಿಮಪಾತ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.
"ನಾನಿಂದು ಜಮ್ಮುವಿನಿಂದ ಶ್ರೀನಗರಕ್ಕೆ ಬಂದೆ. ಬನಿಹಾಲ್‌ನಿಂದ ಶ್ರೀನಗರದವರೆಗೆ ನಿರಂತರವಾಗಿ ಹಿಮ ಬೀಳುತ್ತಿದೆ. ಪರಿಸ್ಥಿತಿ ಬಹಳ ಆಘಾತಕಾರಿಯಾಗಿದೆ. ಸುರಂಗ ಮತ್ತು ಖಾಜಿಗುಂಡ್ ನಡುವೆ ಸುಮಾರು 2000 ವಾಹನಗಳು ಸಿಲುಕಿಕೊಂಡಿರುವುದನ್ನು ಗಮನಿಸಿದೆ. ನಮ್ಮ ಕಚೇರಿ ಸಂಪರ್ಕದಲ್ಲಿದ್ದು, ಸಿಕ್ಕಿಬಿದ್ದ ವಾಹನಗಳನ್ನು ತೆರವುಗೊಳಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಶ್ರೀನಗರದಲ್ಲಿ ಭಾರಿ ಹಿಮಪಾತ: ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು - HEAVY SNOWFALL IN SRINAGAR