ಹೈದರಾಬಾದ್: 'ಈನಾಡು' ಸಮೂಹ ಸಂಸ್ಥೆಗಳ ಅಧ್ಯಕ್ಷ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರ 7.5 ಅಡಿ ಎತ್ತರದ ಪ್ರತಿಮೆ ಸಿದ್ಧವಾಗುತ್ತಿದೆ. ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಪದ್ಮವಿಭೂಷಣ ರಾಮೋಜಿ ಅವರ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಪ್ರತಿಮೆಯನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲಾಗುತ್ತದೆ.
ಜಗತ್ಪ್ರಸಿದ್ಧ ಫಿಲ್ಮ್ ಸಿಟಿಯ ನಿರ್ಮಾತೃ ರಾಮೋಜಿ ರಾವ್ (87) ಜೂನ್ 8 ರಂದು ನಿಧನರಾಗಿದ್ದಾರೆ. ಆಂಧ್ರ ಪ್ರದೇಶದ ವಿಜಯನಗರ ಸಂಸದ ಕಾಳಿಶೆಟ್ಟಿ ಅಪ್ಪಲನಾಯ್ಡು ಅವರ ಆಶಯದಂತೆ ಕೊತಪೇಟ್‌ನಲ್ಲಿ ಖ್ಯಾತ ಶಿಲ್ಪಿ ರಾಜಕುಮಾರ್ ವುಡೆಯಾರ್ ಅವರು ರಾಮೋಜಿ ಅವರ ಪ್ರತಿಮೆಯನ್ನು ತಯಾರಿಸುತ್ತಿದ್ದಾರೆ. ರಾಮೋಜಿ ಅವರ ಅನೇಕ ಛಾಯಚಿತ್ರಗಳನ್ನು ಶಿಲ್ಪಿ ರಾಜಕುಮಾರ್ ನೋಡಿದ ಬಳಿಕ 60ನೇ ವಯಸ್ಸಿನಲ್ಲಿದ್ದ ರಾಮೋಜಿ ರಾವ್ ಅವರ ಭಾವಚಿತ್ರದಲ್ಲಿರುವಂತೆ ಪ್ರತಿಮೆಗೆ ರೂಪ ನೀಡುತ್ತಿದ್ದಾರೆ.
ರಾಮೋಜಿ ರಾವ್ ಅವರ 7.5 ಅಡಿ ಎತ್ತರದ ಈ ಪ್ರತಿಮೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪೂರ್ತಿದಾಯಕ ವ್ಯಕ್ತಿತ್ವದ ರಾಮೋಜಿ ರಾವ್ ಅವರ ಪ್ರತಿಮೆ ನಿರ್ಮಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಶಿಲ್ಪಿ ರಾಜಕುಮಾರ್ ತಿಳಿಸಿದ್ದಾರೆ. ಸಂಸದ ಕಾಳಿಶೆಟ್ಟಿ ಅಪ್ಪಲನಾಯ್ಡು ಸಹ ಶುಕ್ರವಾರ ರಾತ್ರಿ ಪ್ರತಿಮೆಯನ್ನು ಪರಿಶೀಲಿಸಿದರು. ರಾಮೋಜಿ ರಾವ್ ಆರಂಭಿಸಿದ 'ಈನಾಡು' ಪತ್ರಿಕೆ ಸ್ಥಾಪನೆಯಾದ ವಿಶಾಖಪಟ್ಟಣದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ.