ನವದೆಹಲಿ: ನ್ಯಾಯಾಲಯದಲ್ಲಿನ ಬಾಕಿ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಾಗಿದ್ದು, ವಿಚಾರಣಾಧೀನ ಕೈದಿಯೊಬ್ಬನನ್ನು ಅನಿರ್ದಿಷ್ಟ ಕಾಲದವರೆಗೆ ಬಂದಿಯಾಗಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪಂಕಜ್ ಮಿಥಾಲ್ ಅವರಿದ್ದ ನ್ಯಾಯಪೀಠವು ಬಿಹಾರದಲ್ಲಿ ದಾಖಲಾದ ಪ್ರಕರಣದಲ್ಲಿ ಸುಮಾರು 4 ವರ್ಷ 2 ತಿಂಗಳುಗಳ ಕಾಲ ಬಂಧನದಲ್ಲಿದ್ದ ವ್ಯಕ್ತಿಗೆ ಜಾಮೀನು ನೀಡುವಾಗ ಮೇಲಿನ ಮಾತು ಹೇಳಿದೆ.
ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಜೂನ್ನಲ್ಲಿ ಪಾಟ್ನಾ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ರೌಶನ್ ಸಿಂಗ್ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
"ವಿಚಾರಣಾಧೀನ ಕೈದಿಯನ್ನು ಅನಿರ್ದಿಷ್ಟ ಸೆರೆವಾಸಕ್ಕೆ ಒಳಪಡಿಸಲು ಸಾಧ್ಯವಿಲ್ಲ. ವಿಚಾರಣೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವುದು ಮೂಲಭೂತ ಹಕ್ಕು. ಇದನ್ನು ನಮ್ಮ ನ್ಯಾಯಶಾಸ್ತ್ರದಲ್ಲಿ ತುಂಬಾ ಒತ್ತಿ ಹೇಳಲಾಗಿದೆ" ಎಂದು ನ್ಯಾಯಪೀಠ ಹೇಳಿತು.
2020ರ ಅಕ್ಟೋಬರ್ನಲ್ಲಿ ಬಂಧನಕ್ಕೊಳಗಾದಾಗಿನಿಂದ ತನ್ನ ಕಕ್ಷಿದಾರರು ಜೈಲಿನಲ್ಲಿದ್ದಾರೆ ಮತ್ತು ಪ್ರಕರಣದ ವಿಚಾರಣೆ ಇನ್ನೂ ಮುಗಿಯುತ್ತಿಲ್ಲ ಎಂದು ಸಿಂಗ್ ಅವರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಇನ್ನೂ ಮೂವರು ಸಾಕ್ಷಿಗಳನ್ನು ಪರಿಶೀಲಿಸಬೇಕಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದರು.
ಪ್ರಕರಣದ ಆರೋಪಿಗಳಲ್ಲಿ ಒಬ್ಬಾತ ಸಲ್ಲಿಸಿದ ಬಿಡುಗಡೆ ಅರ್ಜಿಯೇ ವಿಚಾರಣೆ ವಿಳಂಬಕ್ಕೆ ಕಾರಣ ಎಂಬ ಸರ್ಕಾರಿ ವಕೀಲರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. "ಆರೋಪಿಯು ಈಗಾಗಲೇ ದೀರ್ಘಾವಧಿಯಿಂದ ಬಂಧನದಲ್ಲಿರುವುದು ಮತ್ತು ಹತ್ತಿರದ ಸಮಯದಲ್ಲಿ ವಿಚಾರಣೆ ಮುಗಿಯುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಅರ್ಜಿದಾರರಾದ ರೌಶನ್ ಸಿಂಗ್ಗೆ ನಾವು ಜಾಮೀನು ನೀಡುತ್ತಿದ್ದೇವೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಹಿಂದೆ ರೌಶನ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ವಿಚಾರಣೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ, ಆರು ತಿಂಗಳೊಳಗೆ ಮುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ವಿಚಾರಣೆ: 3,600 ಕೋಟಿ ರೂ.ಗಳ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಪ್ರಕರಣದಲ್ಲಿ ಜಾಮೀನು ಕೋರಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ.ಬಿ. ವರಾಳೆ ಅವರ ಪೀಠವು ಸಿಬಿಐಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಪೌರತ್ವ ರದ್ದು ಕೋರಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್