ಕೊಚ್ಚಿ:ನ್ಯಾಯಮೂರ್ತಿ ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಐವರು ನ್ಯಾಯಾಧೀಶರ ವಿಶೇಷ ಪೀಠವನ್ನು ರಚಿಸುವುದಾಗಿ ಕೇರಳ ಹೈಕೋರ್ಟ್ ಗುರುವಾರ ತಿಳಿಸಿದೆ.
ಸಮಿತಿಯ ವರದಿಯನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ ಏಕ ನ್ಯಾಯಾಧೀಶರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್.ಮನು ಅವರ ನ್ಯಾಯಪೀಠ ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷ ಪೀಠವು ಮಹಿಳಾ ನ್ಯಾಯಾಧೀಶರನ್ನು ಸಹ ಒಳಗೊಂಡಿರುತ್ತದೆ ಎಂದು ಹೈಕೋರ್ಟ್ ತನ್ನ ಮೌಖಿಕ ಅವಲೋಕನದಲ್ಲಿ ತಿಳಿಸಿದೆ.
ಸಮಿತಿಯ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಬಹಿರಂಗಪಡಿಸಲು ಅನುಮತಿ ನೀಡಿದ ರಾಜ್ಯ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಏಕ ನ್ಯಾಯಾಧೀಶರ ಪೀಠವು ಆಗಸ್ಟ್ 13ರಂದು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಿಡುಗಡೆಗೆ ಅನುಮತಿ ನೀಡಿತ್ತು.
ವರದಿಯಲ್ಲಿನ ಮಾಹಿತಿಯನ್ನು ಬಹಿರಂಗ ಮಾಡುವಂತೆ ಮಾಡುವಂತೆ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಎಸ್‌ಪಿಐಒ) ನಿರ್ದೇಶನ ನೀಡಿದ ಮಾಹಿತಿ ಆಯೋಗದ ಜುಲೈ 5 ರ ಆದೇಶವನ್ನು ಪ್ರಶ್ನಿಸಿ ಚಲನಚಿತ್ರ ನಿರ್ಮಾಪಕ ಸಜಿಮೋನ್ ಪರಯಿಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವ್ಯಕ್ತಿಗಳ ವೈಯಕ್ತಿಕ, ಖಾಸಗಿ ಮಾಹಿತಿಗಳು ಸೋರಿಕೆಯಾಗದಂತೆ ವರದಿಯನ್ನು ಸೂಕ್ತವಾಗಿ ಬಹಿರಂಗಪಡಿಸುವಂತೆ ಮಾಹಿತಿ ಆಯೋಗವು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸೂಚಿಸಿತ್ತು.
ಏಕ ನ್ಯಾಯಾಧೀಶರ ಈ ಆದೇಶವನ್ನು ಪ್ರಶ್ನಿಸಿ ಪರಯಿಲ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಸಮಿತಿಯ ವರದಿಗೆ ಸಂಬಂಧಿಸಿದ ವಿಷಯಗಳ ವಿಚಾರಣೆಗಾಗಿ ವಿಶೇಷ ಪೀಠವೊಂದನ್ನು ರಚಿಸಲು ತೀರ್ಮಾನಿಸಿದೆ.
2017ರ ನಟಿಯ ಮೇಲಿನ ಹಲ್ಲೆ ಪ್ರಕರಣ ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ಶೋಷಣೆಯ ಘಟನೆಗಳು ಬಹಿರಂಗವಾದ ನಂತರ ಇವುಗಳ ವಿಚಾರಣೆಗಾಗಿ ಕೇರಳ ಸರ್ಕಾರವು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಿತ್ತು. ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ ಹಲವಾರು ನಟರು ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಆರೋಪಗಳು ಕೇಳಿಬಂದ ನಂತರ, ರಾಜ್ಯ ಸರ್ಕಾರ ಆಗಸ್ಟ್ 25ರಂದು ಈ ಕುರಿತು ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಹೇಮಾ ವರದಿಯ ಎಡಿಟ್ ಮಾಡದ ಪ್ರತಿ ನೀಡಿ: ಕೇರಳ ಸರ್ಕಾರಕ್ಕೆ ಮಹಿಳಾ ಆಯೋಗದ ಸೂಚನೆ - Hema Committee Report