ಚೆನ್ನೈ:ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ಪ್ರವಾಸಿಗರಿದ್ದ ವಾಹನ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, "ದೇಗುಲ ದರ್ಶನ ಮುಗಿಸಿ ಪ್ರವಾಸಿಗರು ವ್ಯಾನ್‌ನಲ್ಲಿ ಹಿಂದಿರುಗುತ್ತಿದ್ದರು. ಉಲುಂದೂರುಪೇಟೆಯ ಮೆಟ್ಟತ್ತೂರು ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದಾಗ ಜೋರು ಮಳೆ ಸುರಿದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಮರಕ್ಕೆ ಗುದ್ದಿದೆ. ಗಾಯಗೊಂಡ ಜನರ ಆಕ್ರಂದನ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು" ಎಂದು ತಿಳಿಸಿದರು.
"ಗಾಯಗೊಂಡ 16 ಮಂದಿಯನ್ನು ಉಳುಂದೂರುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸರು ಮಾಹಿತಿ ನೀಡಿದರು.