ಜೈಪುರ: ರಾಜಸ್ಥಾನದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಆರು ಪಾಕಿಸ್ತಾನಿ ಹಿಂದೂ ವಲಸಿಗರಿಗೆ ಶುಕ್ರವಾರ ಭಾರತೀಯ ಪೌರತ್ವ ನೀಡಲಾಯಿತು. ಜೈಪುರದ ಹೆಚ್ಚುವರಿ ಜಿಲ್ಲಾಧಿಕಾರಿ (ದಕ್ಷಿಣ) ಶಫಾಲಿ ಕುಶ್ವಾಹಾ ಅವರು ವಲಸಿಗರಾದ ಪ್ರೇಮಲತಾ, ಸಂಜಯ್ ರಾಮ್, ಬೆಜಾಲ್, ಜಜ್ರಾಜ್, ಕೇಕು ಮಾಯ್ ಮತ್ತು ಗೋಮಂಡ್ ರಾಮ್ ಅವರಿಗೆ ಪೌರತ್ವ ಪ್ರಮಾಣಪತ್ರ ಹಸ್ತಾಂತರಿಸಿದರು. ಪಾಕಿಸ್ತಾನದ ಕರಾಚಿಯಿಂದ ಸ್ಥಳಾಂತರಗೊಂಡು 2010ರಲ್ಲಿ ಭಾರತಕ್ಕೆ ಬಂದ 41 ವರ್ಷದ ಪ್ರೇಮಲತಾ, ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. "ಭಾರತಕ್ಕೆ ಬಂದ ನಂತರ ನಮಗೆ ನಿಜವಾದ ಸ್ವಾತಂತ್ರ್ಯದ ಭಾವನೆ ಬಂದಿದೆ" ಎಂದು ಅವರು ಹೇಳಿದರು.
ಸಂಜಯ್ ರಾಮ್ ಮಾತನಾಡಿ, "ನಾನು ಕಳೆದ 10 ವರ್ಷಗಳಿಂದ ಭಾರತೀಯ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದೆ, ಇಂದು ಹಲವು ವರ್ಷಗಳ ಸುದೀರ್ಘ ಪ್ರಯತ್ನಕ್ಕೆ ಫಲ ಸಿಕ್ಕಿದೆ, ಈಗ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಬಹುದು" ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಭಾರತೀಯ ಪ್ರಜೆಗಳಾಗಿರುವ ವಲಸಿಗರನ್ನು ಅಭಿನಂದಿಸಿದರು. ಭಾರತೀಯ ಪೌರತ್ವದ ಪುರಾವೆಗಳ ಕೊರತೆಯಿಂದಾಗಿ, ಹಲವರು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಭಾರತೀಯ ಪೌರತ್ವ ಪಡೆದ ನಂತರ, ಎಲ್ಲ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅರ್ಹರಾಗುತ್ತಿದ್ದಾರೆ ಎಂದು ಅವರು ಹೇಳಿದರು.