ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2047 ರ ನವಭಾರತ ಗುರಿಯನ್ನು ಪ್ರಸ್ತಾಪಿಸಿದ್ದಾರೆ. ಸತತ ಮೂರನೇ ವರ್ಷವೂ ಶೇಕಡಾ 7 ರಷ್ಟು ಜಿಡಿಪಿ ದರದ ಬೆಳವಣಿಗೆ, 5.4ಕ್ಕೆ ಹಣದುಬ್ಬರ ಇಳಿಕೆಯಾಗಿದೆ ಎಂಬ ಅಂಶಗಳು ಇದರಲ್ಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಅನ್ನು ನಿರ್ಮಲಾ ಅವರು ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಸೋಮವಾರ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಕೆಲ ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ.
ನವಭಾರತಕ್ಕಾಗಿ 6 ಮಂತ್ರಗಳು:ನವ ಭಾರತಕ್ಕಾಗಿ ಸರ್ಕಾರವು ಹೊಸ ಅಭಿವೃದ್ಧಿ ವಿಧಾನ ಅಳವಡಿಸಿಕೊಳ್ಳಬೇಕು ಎಂಬುದನ್ನ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಅಭಿವೃದ್ಧಿ ದೆಸೆಯಲ್ಲಿ ಯೋಚಿಸುವ ಸರ್ಕಾರವು ಕೆಳ ಮತ್ತು ಮೇಲಿನ ಸ್ಥರದ ಸುಧಾರಣೆಗೆ ಒತ್ತು ನೀಡಬೇಕು. ಇವು ರಚನಾತ್ಮಕ ಸುಧಾರಣೆಗಳು, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ನೀಡುತ್ತವೆ. ಅವುಗಳಲ್ಲಿ ಈ ಆರು ಕ್ಷೇತ್ರಗಳು ಪ್ರಮುಖವಾಗಿವೆ.
- ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು.
- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ, ವಿಸ್ತರಣೆ ಹೆಚ್ಚಿಸುವುದು.
- ಭವಿಷ್ಯದ ಬೆಳವಣಿಗೆಗೆ ಕೃಷಿ ಕ್ಷೇತ್ರ ಮೂಲಾಧಾರ. ಅದಕ್ಕಿರುವ ಸಮಸ್ಯೆಗಳ ನಿವಾರಣೆ.
- ದೇಶದಲ್ಲಿ ಹಸಿರು ಕ್ರಾಂತಿಗೆ ಹಣಕಾಸಿನ ನೆರವು.
- ಶಿಕ್ಷಣ-ಉದ್ಯೋಗದ ನಡುವಿನ ಅಂತರವನ್ನು ನಿವಾರಿಸಬೇಕು.
- ದೇಶದ ಪ್ರಗತಿಯಲ್ಲಿ ರಾಜ್ಯಗಳ ಪಾಲಿದೆ. ರಾಜ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು
ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳ:ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು. ಕಳೆದ ಹಣಕಾಸು ವರ್ಷದಲ್ಲಿ ಎಫ್‌ಡಿಐ ಒಳಹರಿವು ಕಡಿಮೆಯಾಗಿದೆ. ದುರ್ಬಲಗೊಳ್ಳುತ್ತಿರುವ ಬೆಳವಣಿಗೆ ದರ, ಆರ್ಥಿಕ ಮುಗ್ಗಟ್ಟು, ವ್ಯಾಪಾರ, ಭೌಗೋಳಿಕ, ರಾಜಕೀಯ ಬಿಕ್ಕಟ್ಟುಗಳು, ಕೈಗಾರಿಕಾ ನೀತಿಗಳಿಂದ ಎಫ್‌ಡಿಐ ಇಳಿಕೆಯಾಗಿದೆ. ಇದನ್ನು ಶೀಘ್ರವಾಗಿ ಹೆಚ್ಚಿಸಬೇಕು. 2024ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ 26.5 ಬಿಲಿಯನ್ ಡಾಲರ್ ಎಫ್‌ಡಿಐ ಹೂಡಿಕೆಯಾಗಿದೆ. 2023 ರಲ್ಲಿ ಇದು 42 ಬಿಲಿಯನ್ ಡಾಲರ್ ಇತ್ತು. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಗುರಿ ಹೊಂದಲಾಗಿದೆ.