ಗ್ಯಾಂಗ್ಟಾಕ್(ಸಿಕ್ಕಿಂ):ಗ್ಯಾಂಗ್‌ಟಾಕ್‌ನ ರಾಣಿಪುಲ್ ಎಂಬಲ್ಲಿ ಶನಿವಾರ ರಾತ್ರಿ ಭಾರಿ ಅಪಘಾತ ಸಂಭವಿಸಿದೆ. ಹಾಲಿನ ಟ್ಯಾಂಕರ್‌ವೊಂದು ದಿಢೀರ್ ಜನ ಸೇರಿದ್ದ ಜಾತ್ರೆಗೆ ನುಗ್ಗಿದೆ. ಇದರಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 30 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಣಿಪುರ್ ತಾಂಬ್ಲಾ ಜಾತ್ರೆಯ ವೇಳೆ ರಾತ್ರಿ ಸುಮಾರಿಗೆ 7.13ಕ್ಕೆ ಘಟನೆ ನಡೆಯಿತು. ಸಿಕ್ಕಿಂ ಹಾಲು ಒಕ್ಕೂಟದ ಟ್ಯಾಂಕರ್ ಸಿಲಿಗುರಿ ಕಡೆಗೆ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಹಠಾತ್ ಜಾತ್ರೆ ನಡೆಯುತ್ತಿದ್ದ ಮೈದಾನಕ್ಕೆ ನುಗ್ಗಿದೆ. ಮೊದಲಿಗೆ ಎರಡ್ಮೂರು ಕಾರುಗಳಿಗೆ ಡಿಕ್ಕಿ ಹೊಡೆಯಿತು. ಬಳಿಕ ನೋಡುನೋಡುತ್ತಿದ್ದಂತೆ ನೇರವಾಗಿ ಜನರ ಮೇಲೆಯೇ ಹರಿದಿದೆ. ಹಲವರು ವಾಹನದಡಿ ಬಿದ್ದು ಸಾವನ್ನಪ್ಪಿದರು. ನೂರಾರು ಗಾಯಾಳುಗಳ ಪೈಕಿ ಕೆಲವರಂತೂ ಕೆಲಕಾಲ ರಸ್ತೆಯಲ್ಲೇ ಯಾತನೆ ಅನುಭವಿಸಿದರು.