ಗ್ಯಾಂಗ್ಟಕ್(ಸಿಕ್ಕಂ):ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಸತತ ಮಳೆಯಿಂದ ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಇದುವರೆಗೆ 6 ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಭೂಕುಸಿತದಿಂದಾಗಿ ಕನಿಷ್ಠ 1,500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಪರಿಹಾರ ಕಾರ್ಯಕ್ಕೆ ಅನೇಕ ಅಡೆತಡೆಗಳು ಎದುರಾಗಿವೆ.
ರಾಜ್ಯಾದ್ಯಂತ ಶುಕ್ರವಾರ ಬೆಳಗಿನ ಜಾವದವರೆಗೂ ನಿರಂತರವಾಗಿ ಮಳೆ ಸುರಿದಿದೆ. ಉತ್ತರ ಸಿಕ್ಕಿಂನಲ್ಲಿ ಗುರುವಾರ ರಾತ್ರಿಯವರೆಗೆ 223 ಮಿ.ಮೀ. ಮತ್ತು ದಕ್ಷಿಣ ಸಿಕ್ಕಿಂನಲ್ಲಿ 120 ಮಿ.ಮೀ.ನಷ್ಟು ಮಳೆ ಅಬ್ಬರಿಸಿದೆ. ಹೀಗಾಗಿ ಎರಡೂ ಕಡೆಗಳಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದೆ. ಇದರ ಪರಿಣಾಮವಾಗಿ ತುಂಗ್‌ನ ಲಿಂಗ್ಸೆ, ಲಿಂಗೆ ಮತ್ತು ಪಯೋಂಗ್‌ನ ಮುಖ್ಯರಸ್ತೆಗಳಲ್ಲಿ ಬಂದ್ ಆಗಿವೆ. ಇದಲ್ಲದೆ, ಕೌಖೋಲಾ ಮತ್ತು ಸುಂಟಲೆ ಪ್ರದೇಶಗಳಲ್ಲಿಯೂ ಭೂಕುಸಿತ ಉಂಟಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಂಡಿದೆ.
ಇದರಿಂದಾಗಿ ಲಾಚೆನ್ ಮತ್ತು ಇತರ ಪ್ರದೇಶಗಳಲ್ಲಿ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಇದೇ ವೇಳೆ, ಮುಖ್ಯ ರಸ್ತೆಗಳು ಹಾಳಾಗಿರುವ ಕಾರಣ ರಕ್ಷಣಾ, ಪರಿಹಾರ ಕಾರ್ಯಕ್ಕೂ ಅಡ್ಡಿಯಾಗಿದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಏರ್‌ಲಿಫ್ಟ್ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರವಾಸಿಗರನ್ನು ರಕ್ಷಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಸಿಕ್ಕಿಂ ಸರ್ಕಾರ ಹರಸಾಹಸಪಡುತ್ತಿದೆ. ಇದೀಗ ಸೇನೆ ನೆರವು ಪಡೆಯಲಾಗಿದೆ.
ಭಾರತೀಯ ಸೇನೆಯ ಕರ್ನಲ್ ಅಂಜನಕುಮಾರ್ ಬಸುಮತರಿ ಮಾತನಾಡಿ, ''ಪ್ರವಾಸಿಗರ ರಕ್ಷಣ ಕಾರ್ಯವನ್ನು ಸೇನೆ ಆರಂಭಿಸಿದೆ. ಆದರೆ, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ವಿವಿಧ ಹೋಟೆಲ್‌ಗಳಲ್ಲಿ ತಂಗಿರುವ ಪ್ರವಾಸಿಗರು ಕೆಲವು ದಿನಗಳಿಗೆ ಆಗುವಷ್ಟು ಆಹಾರ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹವಾಮಾನ ವೈಪರೀತ್ಯವು ಏರ್ ಲಿಫ್ಟಿಂಗ್‌ಗೆ ಅನುಕೂಲಕರವಾಗಿಲ್ಲ'' ಎಂದು ತಿಳಿಸಿದರು.
ಈಸ್ಟರ್ನ್ ಹಿಮಾಲಯನ್ ಟ್ರಾವೆಲ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪನ್ ಘೋಷ್ ಮಾತನಾಡಿ, ''ಸಮಾರು 1,500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಮುಖ್ಯ ರಸ್ತೆ ಹಾಳಾಗಿರುವುದರಿಂದ ಅವರನ್ನು ರಸ್ತೆ ಮೂಲಕ ರಕ್ಷಿಸಲು ಯಾವುದೇ ಅವಕಾಶವಿಲ್ಲ. ಅವರನ್ನು ರಕ್ಷಿಸಲು ಏರ್ ಲಿಫ್ಟಿಂಗ್ ಮಾತ್ರವೇ ಪರ್ಯಾಯ ಮಾರ್ಗವಾಗಿದೆ'' ಎಂದು ಹೇಳಿದರು.
ಇದರ ನಡುವೆ ಗ್ಯಾಂಗ್ಟಕ್ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಕಾಲ ಮತ್ತಷ್ಟು ಹೆಚ್ಚಿನ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ನೀಡಿದೆ. ಹೆಚ್ಚಿನ ಮಳೆಯಾದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ತೀಸ್ತಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ತೀಸ್ತಾ, ಮಲ್ಲಿ, ಗೈಲ್‌ಖೋಲಾ, ಡೋರ್ ಪ್ರದೇಶದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಕುವೈತ್ ಅಗ್ನಿ ದುರಂತ; 45 ಮೃತದೇಹಗಳ ಸ್ಥಳಾಂತರ, ಕೇರಳದಲ್ಲಿ ಸಂತ್ರಸ್ತರಿಗೆ ಕಣ್ಣೀರಿನ ವಿದಾಯ