ಕಡಲೂರು(ತಮಿಳುನಾಡು):ಗಳಿಸಿದ ಹಣ ಕಾಪಾಡಿಕೊಳ್ಳುವುದೇ ಈಗ ಬಹುದೊಡ್ಡ ಸವಾಲು. ಬುದ್ಧಿವಂತರು ಹೆಚ್ಚು ನಗದನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ಗಳಲ್ಲಿ ಠೇವಣಿ ಇಡುತ್ತಾರೆ. ವರ್ತಕರಾದಲ್ಲಿ ವಿವಿಧೆಡೆ ಹೂಡಿಕೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ವರ್ತಕ 15 ಲಕ್ಷ ರೂಪಾಯಿ ನಗದನ್ನು ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದ. ದುರಾದೃಷ್ಟವಶಾತ್, ಅಂಗಡಿಯ ಸಿಬ್ಬಂದಿ ಆ ಅಕ್ಕಿ ಚೀಲವನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದಾನೆ!.
ತಮಿಳುನಾಡಿನ ಕಡಲೂರು ಜಿಲ್ಲೆಯ ವಡಲೂರಿನಲ್ಲಿ ಈ ಘಟನೆ ನಡೆದಿದೆ. ಷಣ್ಮುಗಂ ಎಂಬ ವರ್ತಕ ಕೆಲವು ವರ್ಷಗಳಿಂದ ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ. ಕಳ್ಳರಿಗೆ ಹೆದರಿ ಅಕ್ಕಿ ಚೀಲದಲ್ಲಿ 15 ಲಕ್ಷ ರೂಪಾಯಿ ಬಚ್ಚಿಟ್ಟಿದ್ದ. ಈ ವಿಚಾರ ತಿಳಿಯದ ಆತನ ಸಿಬ್ಬಂದಿ ಅಕ್ಕಿ ಮೂಟೆಯನ್ನು ಮಾರಾಟ ಮಾಡಿದ್ದ. ಅಕ್ಕಿ ಖರೀದಿಸಿದವರ ಮನೆಗೆ ತೆರಳಿ ಹಣದ ಚೀಲ ಕೇಳಿದಾಗ, ಅವರು ಉಲ್ಟಾ ಹೊಡೆದಿದ್ದಾರೆ. ಸಿಟ್ಟಿಗೆದ್ದ ವರ್ತಕ ಪೊಲೀಸರಿಗೆ ದೂರು ನೀಡಿದ್ದಾನೆ.
ಘಟನೆಯ ಪೂರ್ಣ ವಿವರ ಹೀಗಿದೆ:ವಡಲೂರಿನ ರಾಘವೇಂದ್ರ ನಗರದಲ್ಲಿ ಷಣ್ಮುಗಂ ಅವರು, ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿಯು ವಡಲೂರು-ನೈವೇಲಿ ಮುಖ್ಯರಸ್ತೆಯಲ್ಲಿದೆ. ಅಂಗಡಿ ಮೇಲೆ ಕಳ್ಳರು ಬೀಳುವ ಭಯದಲ್ಲಿ ವ್ಯಾಪಾರದಲ್ಲಿ ಬಂದ 15 ಲಕ್ಷ ರೂಪಾಯಿ ಹಣವನ್ನು ಡ್ರಾಯರ್ನಲ್ಲಿ ಇಡದೆ, ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದರು.