ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ ಶಿವಸೇನೆ (ಶಿಂಧೆ ಬಣ) ಘೋಷಿಸಿದೆ.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪಕ್ಷದ ನಾಯಕ, ಮಹಾರಾಷ್ಟ್ರ ಉಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬರೆದ ಬೆಂಬಲ ಪತ್ರವನ್ನು ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ್ ಅವರಿಗೆ ಮಂಗಳವಾರ ಹಸ್ತಾಂತರಿಸಿತು.
ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಸಕ್ರಿಯವಾಗಿ ಬೆಂಬಲಿಸಲು ದೆಹಲಿ ಶಿವಸೇನೆ ಘಟಕಕ್ಕೆ ಸೂಚಿಸಲಾಗಿದೆ. ಬಿಜೆಪಿ ಜೊತೆಗೆ ಹೊಂದಾಣಿಕೆ ಮತ್ತು ಪ್ರಚಾರದಲ್ಲಿ ಭಾಗವಹಿಸಲು ನಮ್ಮ ನಾಯಕರಿಗೆ ನಿರ್ದೇಶನ ನೀಡಿದ್ದಾಗಿ ಏಕನಾಥ್ ಶಿಂಧೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ನಾಯಕತ್ವ ಅಡಿ ಶಿವಸೇನೆ ಪಕ್ಷವು ಬಾಳಾ ಠಾಕ್ರೆ ಅವರು ಪ್ರತಿಪಾದಿಸಿದ 'ಹಿಂದುತ್ವ ಸಿದ್ಧಾಂತದ ದೀವಟಿಗೆ'. ಈ ಪರಂಪರೆಯನ್ನು ಮುಂದುವರಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಸಕ್ರಿಯ ಮತ್ತು ಹೆಮ್ಮೆಯ ಸದಸ್ಯನಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಅವಿಭಜಿತ ಶಿವಸೇನೆ ಪಕ್ಷವು, ಈ ಹಿಂದಿನ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ.