ವಾರಾಣಸಿ (ಉತ್ತರಪ್ರದೇಶ) :ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿರುವ ಮೂಲ ಕಾಶಿ ವಿಶ್ವನಾಥನಿಗೆ (ಶಿವಲಿಂಗ) ಸೋಮವಾರ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕುವುದಾಗಿ ಘೋಷಿಸಿದ್ದ ವಾರಾಣಸಿಯ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮಿಗಳನ್ನು ಪೊಲೀಸರು ತಡೆದಿದ್ದಾರೆ. ಮಠದಿಂದ ಹೊರಬರದಂತೆ ತಡೆವೊಡ್ಡಿದ್ದಾರೆ.
ಇದು ಪೊಲೀಸರು ಮತ್ತು ಮಠದ ಭಕ್ತರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಶ್ರೀಗಳನ್ನು ಮಠದಿಂದ ಹೊರಬರದಂತೆ ತಡೆದಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಶಿವಲಿಂಗ ಇರುವ ಪ್ರದೇಶದಲ್ಲಿ ನಿರ್ಬಂಧ (144 ಸೆಕ್ಷನ್) ವಿಧಿಸಿರುವ ಕಾರಣ, ಅಲ್ಲಿಗೆ ಹೋಗಲು ಅವಕಾಶ ನೀಡಲಾಗುವುದಿಲ್ಲ. ನಿರ್ಧಾರವನ್ನು ಹಿಂಪಡೆಯುವಂತೆ ಪೊಲೀಸರು ಶ್ರೀಗಳಲ್ಲಿ ಕೋರಿದ್ದಾರೆ.
ಹೊಸ ಸಂಪ್ರದಾಯ ಬೇಡ:ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮಿಗಳು ಇಂದು ಜ್ಞಾನವಾಪಿ ಪ್ರದೇಶದಲ್ಲಿರುವ ಶಿವಲಿಂಗಕ್ಕೆ ಇಂದು ಮಧ್ಯಾಹ್ನ 3 ಗಂಟೆಗೆ ಪೂಜೆ ಸಲ್ಲಿಸುವುದಾಗಿ ಘೋಷಿಸಿದ್ದರು. ಇದರಿಂದ ಅಲರ್ಟ್ ಆಗಿದ್ದ ಪೊಲೀಸರು ಯಾವುದೇ ಅಚಾತುರ್ಯಗಳು ನಡೆಯದಂತೆ ಎಚ್ಚರ ವಹಿಸಿದ್ದರು. ಜ್ಞಾನವಾಪಿ ಸ್ಥಳ ವಿವಾದದ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿರುವ ನಡುವೆ ಪೂಜೆ ನಡೆಸುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದರು.
ವಿವಾದದ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪೂಜೆ ಸಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ಇದು ಮುಂದೆ ಸಮಸ್ಯೆಗೆ ಕಾರಣವಾಗಲಿದೆ. ಜೊತೆಗೆ ಆ ಸ್ಥಳದಲ್ಲಿ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪೂಜೆ ಮಾಡುವ ನಿರ್ಣಯವನ್ನು ವಾಪಸ್ ಪಡೆಯುವಂತೆ ಶ್ರೀಗಳಲ್ಲಿ ಪೊಲೀಸರು ಅರಿಕೆ ಮಾಡಿದರು. ಆದಾಗ್ಯೂ ಶ್ರೀಗಳು ಇದು ಹೊಸ ಸಂಪ್ರದಾಯವಲ್ಲ. ಅಲ್ಲಿನ ಶಿವಲಿಂಗ ಮೂಲ ಕಾಶಿ ವಿಶ್ವನಾಥ. ಪೂಜೆ ಸಲ್ಲಿಸುವುದು ಧರ್ಮ, ಸಂಪ್ರದಾಯವಾಗಿದೆ. ಹೀಗಾಗಿ ನಾವು ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.