ನವದೆಹಲಿ:ಇಸ್ರೇಲ್ ಮತ್ತು ಇರಾನ್ ನಡುವೆ ತಲೆದೋರಿರುವ ಸಂಘರ್ಷದ ಬಗ್ಗೆ ಭಾರತ ತೀವ್ರ ಕಳವಳ, ಆತಂಕ ವ್ಯಕ್ತಪಡಿಸಿದೆ. ಎರಡೂ ರಾಷ್ಟ್ರಗಳು ವೈರತ್ವ ಮರೆತು ಶಾಂತಿ ಸಂಧಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದೆ.
ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಉಭಯ ರಾಷ್ಟ್ರಗಳ ಮಧ್ಯೆ ಹೆಚ್ಚುತ್ತಿರುವ ಬಿಕ್ಕಟ್ಟು ಶಾಂತಿ ಮತ್ತು ಭದ್ರತೆಗೆ ಮಾರಕವಾಗಲಿದೆ. ಹೀಗಾಗಿ ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ.
ಹೆಚ್ಚುತ್ತಿರುವ ಹಗೆತನವನ್ನು ಭಾರತ ಗಂಭೀರವಾಗಿ ಪರಿಗಣಿಸುತ್ತಿದೆ. ಉಭಯ ರಾಷ್ಟ್ರಗಳಲ್ಲಿ ಭಾರತೀಯರ ಜೊತೆ ನಿಕಟ ಸಂಪರ್ಕ ಸಾಧಿಸಲಾಗುತ್ತಿದೆ. ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಭಾರತೀಯರು ಎಚ್ಚರಿಕೆ ವಹಿಸಬೇಕು ಮತ್ತು ಅಲ್ಲಿಗೆ ತೆರಳುತ್ತಿರುವುದರ ಬಗ್ಗೆ ಯೋಚಿಸಿ ಎಂದು ಸಲಹೆ ನೀಡಿದೆ.
ದಾಳಿಗೆ ಪ್ರತಿದಾಳಿ:ಈ ತಿಂಗಳ ಆರಂಭದಲ್ಲಿ ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. ಇದರಲ್ಲಿ ಹಲವಾರು ಹಿರಿಯ ಸೇನೆ ಮತ್ತು ವಿದೇಶಾಂಗ ಅಧಿಕಾರಿಗಳು ಸಾವಿಗೀಡಾಗಿದ್ದರು. ಇದು ಇಸ್ರೇಲ್ ನಡೆಸಿದ ದಾಳಿ ಎಂದು ಇರಾನ್ ಆರೋಪಿಸಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿತ್ತು. ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದು ಖಚಿತ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಹೇಳಿದ್ದರು. ಇದರಲ್ಲಿ ಅವರು ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದರು.
ಇದರ ಬೆನ್ನಲ್ಲೇ ಶನಿವಾರ ರಾತ್ರಿ ಇಸ್ರೇಲ್ ಮೇಲೆ ಇರಾನ್ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದೆ. ಈ ಮೂಲಕ ಸಿರಿಯಾದಲ್ಲಿನ ತನ್ನ ಕಾನ್ಸುಲೇಟ್ ಮೇಲೆ ದಾಳಿ ಮಾಡಿದ್ದರ ವಿರುದ್ಧ ಸೇಡು ತೀರಿಸಿಕೊಂಡಿದೆ. ಆಪರೇಷನ್ ಟ್ರೂ ಪ್ರಾಮಿಸ್ ಹೆಸರಿನಲ್ಲಿ ಇಸ್ರೇಲ್ ಮೇಳೆ ನೂರಕ್ಕೂ ಹೆಚ್ಚು ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಆ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಇರಾಕ್‌ನ ವಾಯುಪ್ರದೇಶದಿಂದ ಇಸ್ರೇಲ್ ಕಡೆಗೆ ಹಾರಿದವು.
ಇವುಗಳಲ್ಲಿ ಕೆಲವನ್ನು ಅಮೆರಿಕ ಸೇನೆಯು ಮಧ್ಯಪ್ರಾಚ್ಯದಲ್ಲೇ ಹೊಡೆದುರುಳಿಸಿವೆ. ಇನ್ನು ಕೆಲವನ್ನು ಸಿರಿಯಾ ಮತ್ತು ಜೋರ್ಡಾನ್ ವಾಯುಪ್ರದೇಶದಲ್ಲಿ ಇಸ್ರೇಲ್ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಅದರಲ್ಲೂ ಕೆಲವು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ದಾಟಿ ಬಂದಿವೆ. ಇವನ್ನು ಇಸ್ರೇಲ್‌ನ ಏರೋಸ್ಪೇಸ್ ಯಶಸ್ವಿಯಾಗಿ ತಡೆದಿದೆ. ಸದ್ಯ ರಾಜಧಾನಿ ಜೆರುಸಲೇಂ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ:ಸಿರಿಯಾ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ಇರಾನ್ - iran attacks israel