ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಯಾವುದೇ ಅತಹಿತಕರ ಘಟನೆ ನಡೆಯದಂತೆ ರಾಮಜನ್ಮಭೂಮಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 10 ಸಾವಿರಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ, ಡ್ರೋನ್ಗಳಿಂದ ಇಡೀ ಪ್ರದೇಶದ ಮೇಲೆ ನಿಗಾ ವಹಿಸಲಾಗುತ್ತಿದೆ.
ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಹದ್ದಿನ ಕಣ್ಣಿಟ್ಟಿದ್ದರೆ, ಸರಯೂ ನದಿಯಲ್ಲಿ ದೋಣಿಗಳ ಮೂಲಕ ಪೊಲೀಸರು ಗಸ್ತು ತಿರುಗಲಿದ್ದಾರೆ. ಅಯೋಧ್ಯೆಯ ಪೊಲೀಸರು ಭೂಮಿ, ನೀರು ಮತ್ತು ಆಕಾಶದಲ್ಲಿ ಭದ್ರತಾ ವ್ಯವಸ್ಥೆ ರೂಪಿಸಿದ್ದಾರೆ.
ಭದ್ರತೆಗೆ ಎಐ ಬಳಕೆ:ಅತ್ಯಾಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ(ಎಐ)ಯನ್ನು ಬಳಸಿಕೊಳ್ಳಲಾಗುತ್ತಿದೆ. ವೈಮಾನಿಕ ಭದ್ರತೆಗಾಗಿ ಡ್ರೋನ್ಗಳನ್ನು ನಿಯೋಜಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವುಗಳಿಂದ ಸೆರೆ ಹಿಡಿದು ಎಚ್ಚರಿಕೆ ವಹಿಸಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಣ್ಗಾವಲು:ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿರುವ ಇಲ್ಲಿನ ಧರ್ಮಪತ್, ರಾಮಪತ್‌ನಿಂದ ಹಿಡಿದು ಹನುಮಾನ್‌ಗಢಿ ಪ್ರದೇಶ, ಅಶರ್ಫಿ ಭವನ ರಸ್ತೆಯವರೆಗೂ ಪೊಲೀಸರು ಗಸ್ತು ತಿರುಗುವುದನ್ನು ಕಾಣಬಹುದು. ಟ್ರಾಫಿಕ್ ನಿಯಂತ್ರಣಕ್ಕೆ, ವಿಶೇಷವಾಗಿ ಗಣ್ಯರ ಆಗಮನದ ವೇಳೆ ಪೊಲೀಸರು ಮುಳ್ಳಿನ ಬ್ಯಾರಿಕೇಡ್ಗಳನ್ನು ಅಳಡಿಸುತ್ತಿದ್ದಾರೆ.