ಚಂಡೀಗಢ (ಪಂಜಾಬ್): ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ದೆಹಲಿ ಚಲೋ ಹೋರಾಟ ಮುಂದುವರಿದಿದೆ. ಆದರೆ, ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ಗಡಿಯಲ್ಲೇ ರೈತರನ್ನು ತಡೆಹಿಡಿಯಲಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ರೈತ ಮುಖಂಡರೊಂದಿಗೆ ಸಂಧಾನ ಸಭೆಗಳನ್ನು ನಡೆಸುತ್ತಿದೆ. ಮತ್ತೊಂದೆಡೆ, ಫೆಬ್ರವರಿ 24ರ ವರೆಗೆ ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ರೈತರ ಆಂದೋಲನದಿಂದಾಗಿ ಪಂಜಾಬ್‌ನ ಏಳು ಜಿಲ್ಲೆಗಳ 20 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಪಟಿಯಾಲ, ಸಂಗ್ರೂರ್, ಶ್ರೀಫತೇಘರ್ ಸಾಹಿಬ್, ಬಟಿಂಡಾ, ಮಾನ್ಸಾ, ಮೊಹಾಲಿ ಮತ್ತು ಶ್ರೀಮುಕ್ತಸರ ಸಾಹಿಬ್ ಜಿಲ್ಲೆಯಲ್ಲಿ ಫೆಬ್ರುವರಿ 24ರ ವರೆಗೆ ಇಂಟರ್‌ನೆಟ್ ಬಂದ್ ಮಾಡಲಾಗಿದೆ.
ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು 20 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂಟರ್‌ನೆಟ್ ಸೇವೆ ರದ್ದು ಮಾಡಲಾಗಿದೆ. ಹರಿಯಾಣ ಮತ್ತು ಪಂಜಾಬ್ ಗಡಿಯಲ್ಲಿ ರೈತರು ಧರಣಿ ಕುಳಿತಿರುವ ಏಳು ಜಿಲ್ಲೆಗಳ ಬ್ಲಾಕ್‌ಗಳಲ್ಲಿ ಈ ನಿಷೇಧ ಹೇರಲಾಗಿದೆ. ಇದಕ್ಕೂ ಮುನ್ನ 7 ದಿನಗಳ ಕಾಲ ಇದೇ ಪ್ರದೇಶದಲ್ಲಿ ನಿಷೇಧಾಜ್ಞೆ ಸಹ ಜಾರಿಗೊಳಿಸಲಾಗಿದೆ.