ಕರ್ನಾಟಕ

karnataka

ETV Bharat / bharat

ತಿರುಪತಿ ಲಡ್ಡು ಕಲಬೆರಕೆ ಆರೋಪದ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಪಿಐಎಲ್ ವಜಾ - TIRUPATI LADDU ROW

ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆ ಸಿಬಿಐ ತನಿಖೆ ಕೋರಿದ್ದ ಪಿಐಎಲ್​ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ತಿರುಪತಿ ಲಡ್ಡು
ತಿರುಪತಿ ಲಡ್ಡು (IANS)

By PTI

Published : Nov 8, 2024, 1:29 PM IST

ನವದೆಹಲಿ: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಸಾಮಾಜಿಕ ಕಾರ್ಯಕರ್ತ ಮತ್ತು 'ಗ್ಲೋಬಲ್ ಪೀಸ್ ಇನಿಶಿಯೇಟಿವ್' ಸಂಘಟನೆಯ ಅಧ್ಯಕ್ಷ ಕೆ.ಎ. ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.

"ನಿಮ್ಮ ಮನವಿಯನ್ನು ನೋಡದರೆ, ನಾವು ಎಲ್ಲಾ ದೇವಾಲಯಗಳು, ಗುರುದ್ವಾರಗಳು ಇತ್ಯಾದಿಗಳಿಗೆ ಪ್ರತ್ಯೇಕ ರಾಜ್ಯಗಳನ್ನು ರಚಿಸಬೇಕಾಗುತ್ತದೆ. ಒಂದು ನಿರ್ದಿಷ್ಟ ಧರ್ಮಕ್ಕೆ ಪ್ರತ್ಯೇಕ ರಾಜ್ಯ ರಚಿಸಬೇಕೆಂದು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಪೀಠ ಹೇಳಿತು.

ಲಡ್ಡು ಪ್ರಸಾದ ಖರೀದಿ ಮತ್ತು ತಯಾರಿಕೆಯಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಸಮಗ್ರ ತನಿಖೆ ನಡೆಸಬೇಕೆಂದು ಪೌಲ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಕ್ಟೋಬರ್ 4 ರಂದು ಐದು ಸದಸ್ಯರ ಸ್ವತಂತ್ರ ಎಸ್ಐಟಿಯನ್ನು ರಚಿಸಿದೆ. ಸಿಬಿಐ ಮತ್ತು ಆಂಧ್ರಪ್ರದೇಶ ಪೊಲೀಸರ ತಲಾ ಇಬ್ಬರು ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಹಿರಿಯ ಅಧಿಕಾರಿ ಸ್ವತಂತ್ರ ಎಸ್​ಐಟಿಯಲ್ಲಿ ಇರಲಿದ್ದಾರೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಕಲಬೆರಕೆ ತುಪ್ಪ ಸೇರಿದಂತೆ 'ಲಡ್ಡು ಪ್ರಸಾದ' ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಆರೋಪಗಳು ಭಕ್ತರಲ್ಲಿ ಗಂಭೀರ ಕಳವಳಗಳನ್ನು ಹುಟ್ಟುಹಾಕಿವೆ ಮತ್ತು ಈ ಪವಿತ್ರ ಕ್ಷೇತ್ರದ ಪಾವಿತ್ರ್ಯಕ್ಕೆ ಕಳಂಕ ತಂದಿವೆ ಎಂದು ಪೌಲ್ ತಮ್ಮ ಪಿಐಎಲ್​ನಲ್ಲಿ ತಿಳಿಸಿದ್ದರು.

ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಅಡಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು. ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಹೀನ ಆರೋಪ ಮಾಡುತ್ತಿದ್ದಾರೆ ಮತ್ತು ರಾಜ್ಯದ ಆಡಳಿತಾರೂಢ ತೆಲುಗು ದೇಶಂ ಪಕ್ಷವು ತನ್ನ ಹೇಳಿಕೆಯನ್ನು ಬೆಂಬಲಿಸಲು ಪ್ರಯೋಗಾಲಯ ವರದಿಯನ್ನು ಪ್ರಸಾರ ಮಾಡುತ್ತಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ

ಇದನ್ನೂ ಓದಿ : ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 3ನೇ ದಿನವೂ ಗದ್ದಲ; ಪ್ರತಿಪಕ್ಷಗಳ 12 ಶಾಸಕರನ್ನು ಹೊರಹಾಕಿದ ಸ್ಪೀಕರ್

ABOUT THE AUTHOR

...view details