ಪಾಟ್ನಾ/ಹೊಸದಿಲ್ಲಿ:ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಸಿ/ಎಸ್‌ಟಿ) ಇದ್ದ ಶೇಕಡಾ 50ರಷ್ಟು ಮೀಸಲಾತಿಯನ್ನು ಶೇ 65ಕ್ಕೆ ಹೆಚ್ಚಿಸಿ ಬಿಹಾರ ಸರ್ಕಾರ ಆದೇಶ ಹೊರಡಿಸಿತ್ತು. ಈ ಸಂಬಂಧ 2023ರಲ್ಲಿ ಬಿಹಾರ ಶಾಸಕಾಂಗ ಮಾಡಿದ್ದ ತಿದ್ದುಪಡಿಗಳನ್ನು ಪಾಟ್ನಾ ಹೈಕೋರ್ಟ್ ರದ್ದುಪಡಿಸಿತ್ತು. ಈ ಬಗ್ಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗುವುದು ಎಂದು ತಿಳಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ಆದರೆ, ಈ ವಾದವನ್ನು ಸದ್ಯಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದ ಪೀಠ, ಬಿಹಾರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಲು ಒಪ್ಪಿಗೆ ಸೂಚಿಸಿತು.
ತೀರ್ಪಿಗೆ ತಡೆ ನೀಡಲು ಕೋರ್ಟ್ ನಕಾರ:ಮಧ್ಯಂತರ ತಡೆ ನೀಡುವಂತೆ ಒತ್ತಾಯಿಸಿದ ಶ್ಯಾಮ್ ದಿವಾನ್, ಈ ವಿಚಾರವನ್ನು ವಿಸ್ತೃತ ಪೀಠವೂ ಪರಿಗಣಿಸಬೇಕಾಗಬಹುದು ಎಂದು ಹೇಳಿದರು. ಈ ಹಂತದಲ್ಲಿ ಮಧ್ಯಂತರ ಪರಿಹಾರ ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಈ ವಾದವನ್ನು ಪೀಠ ಒಪ್ಪಿತು. ಈ ಹಂತದಲ್ಲಿ ಮುಂದೂಡಲು ನಾವು ಒಲವು ತೋರುತ್ತಿಲ್ಲ, ಸೆಪ್ಟೆಂಬರ್‌ನಲ್ಲಿ ಅಂತಿಮ ವಿಚಾರಣೆಗೆ ನಾವು ಪಟ್ಟಿ ಮಾಡುತ್ತೇವೆ ಎಂದು ಪೀಠ ಹೇಳಿತು. ತೀರ್ಪಿಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಗೆ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ಇದೇ ವೇಳೆ ನಿರಾಕರಿಸಿತು.
ಸಂವಿಧಾನದ ಚೌಕಟ್ಟು ಮೀರಿದೆ: ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಜೂನ್ 20ರಂದು ವಿಚಾರಣೆ ನಡೆಸಿದ್ದ ಪಟನಾ ಹೈಕೋರ್ಟ್, ''ಮೀಸಲಾತಿ ಹೆಚ್ಚಿಸುವ ತೀರ್ಮಾನವು ಕಾನೂನಿನಲ್ಲಿ ಕೆಟ್ಟ ಪದ್ಧತಿಯಾಗಿದ್ದು, ಸಮಾನತೆ ಷರತ್ತಿನ ವಿರುದ್ಧವಾಗಿದೆ'' ಎಂದು ಹೇಳಿ ಹೈಕೋರ್ಟ್ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಶೇ.68.52ರಷ್ಟು ಹಿಂದುಳಿದ ಸಮುದಾಯಗಳಿರುವುದರಿಂದ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಹಾರ ಸರ್ಕಾರ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಬಿಹಾರ ವಿಧಾನಸಭೆ 2023ರ ನವೆಂಬರ್‌ನಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತ್ತು.
ಇದನ್ನೂ ಓದಿ:ದೆಹಲಿ ಕೋಚಿಂಗ್ ಸೆಂಟರ್ ದುರಂತ: ಮೂರು ದಿನದಲ್ಲಿ ವರದಿ ನೀಡಲು ಸೂಚಿಸಿದ ದೆಹಲಿ ಲೆಫ್ಟಿನೆಂಟ್ ಗವರ್ನರ್ - COACHING CENTRE TRAGEDY