ಹೈದರಾಬಾದ್:ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ. ಒಂದೇ ವಾರದಲ್ಲಿ ಎರಡನೇ ಬೆದರಿಕೆ ಕರೆ ಮಾಡಲಾಗಿದ್ದು, ದುಷ್ಕರ್ಮಿಗಳು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಗುರುವಾರ ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್ಗೆ ಈ ಕರೆ ಬಂದಿದ್ದು, ಇದರ ಎರಡು ದಿನಗಳ ಹಿಂದಷ್ಟೇ ಇದೇ ಗ್ಯಾಂಗ್ ಹೆಸರು ಹೇಳಿಕೊಂಡು ಬೆದರಿಕೆ ಕರೆ ಮಾಡಲಾಗಿತ್ತು.
ಹೊಸದಾಗಿ ಬಂದಿರುವ ಬೆದರಿಕೆ ಕರೆಯಲ್ಲಿ ಕೇವಲ ನಟನಿಗೆ ಮಾತ್ರವಲ್ಲ, ಲಾರೆನ್ಸ್ ಬಿಷ್ಣೋಯಿ ಬಗ್ಗೆ ಸಂಗೀತ ಸಂಯೋಜಿಸಿರುವ ಗೀತ ರಚನೆಕಾರನನ್ನು ಕೊಲ್ಲುವ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ, ಧೈರ್ಯವಿದ್ದರೆ ’ಮೈ ಸಿಕಂದರ್ ಹೂನ್’ ಗೀತ ರಚನೆಕಾರರನ್ನು ಉಳಿಸಿಕೊಳ್ಳುವಂತೆ ಸವಾಲು ಹಾಕಲಾಗಿದೆ. ಕರೆ ಮಾಡಿದ ಅಪರಿಚಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕರೆಯನ್ನು ಗಂಭೀರವಾಗಿ ಸ್ವೀಕರಿಸಿರುವ ಮುಂಬೈ ಪೊಲೀಸರು, ಕರೆಯ ಮೂಲ ಪತ್ತೆಗೆ ಮುಂದಾಗಿದ್ದಾರೆ. ಕಳೆದ ವಾರವೂ ಕೂಡ ಸಲ್ಮಾನ್ ಖಾನ್ಗೆ ಹತ್ಯೆ ಮಾಡುವ ಅನೇಕ ಬೆದರಿಕೆ ಕರೆಗಳು ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಬಂದಿದ್ದವು.
ಅಹಮದಾಬಾದ್ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯರೆಂದು ಶಂಕಿಸಲಾದ ಕೆಲವರು ಏಪ್ರಿಲ್ನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ನವಿಮುಂಬೈ ಪೊಲೀಸರು, ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ವಿಫಲ ಯತ್ನವನ್ನು ಬಿಷ್ಣೋಯಿ ಗ್ಯಾಂಗ್ ನಡೆಸಿತ್ತು ಎಂದು ತಿಳಿಸಿದ್ದರು.
ಕರ್ನಾಟಕದಲ್ಲಿ ಸೆರೆ ಸಿಕ್ಕ ಆರೋಪಿ: ನವೆಂಬರ್ 5ರಂದು ನಟನಿಗೆ ಬೆದರಿಕೆ ಕರೆ ಮಾಡಿ, ಬಿಷ್ಣೋಯಿ ಸಮಾಜದ ಕ್ಷಮೆ ಕೋರಬೇಕು, ಇಲ್ಲದಿದ್ದರೆ 5 ಕೋಟಿ ರೂ ಹಣ ನೀಡಬೇಕು ಎಂದು ಕರೆ ಮಾಡಿ ಬೇಡಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಆರೋಪಿ ಕರ್ನಾಟಕದ ಹಾವೇರಿಯಲ್ಲಿ ಕಳೆದೆರಡು ತಿಂಗಳಿನಿಂದ ನೆಲೆಸಿರುವುದು ಗೊತ್ತಾಗಿದೆ. ಈತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬಗ್ಗೆ ತಾನು ಸಾಕಷ್ಟು ಅಭಿಮಾನ ಹೊಂದಿದ್ದಾಗಿ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಬೆನ್ನಲ್ಲೇ ಸೂಪರ್ ಸ್ಟಾರ್ ಶಾರುಖ್ ಖಾನ್ಗೂ ಕೊಲೆ ಬೆದರಿಕೆ: ಎಫ್ಐಆರ್ ದಾಖಲು