ಹೈದರಾಬಾದ್: ಅನೇಕ ಬಾರಿ ಕಷ್ಟ ಬಂದಾಗ, ಬದುಕು ಸವಾಲಾದಾಗ ಕೈ ಚೆಲ್ಲುತ್ತೇವೆ. ಅಯ್ಯೋ ನಮಗೆ ಉತ್ತಮ ಅವಕಾಶ ಇಲ್ಲ ಎಂದು ಹಲುಬುತ್ತೇವೆ. ಆದರೆ, ಇದೆಲ್ಲವನ್ನು ಮೆಟ್ಟಿನಿಂತಾಗ ಮಾತ್ರ ಅದರ ಯಶಸ್ಸು ಕಾಣಬಹುದು. ಅನೇಕ ಬಾರಿ ಇಂತಹ ದಿಟ್ಟ ಮನಸ್ಸಿನ ಹೋರಾಟಗಾರರು ನಮಗೆ ಸ್ಪೂರ್ತಿಯಾಗುತ್ತಾರೆ. ಅಂತಹವರಲ್ಲಿ ಒಬ್ಬರು ಸಾಯಿ ಶಿಲ್ಪಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರಿಗೆ ಓದಿನಲ್ಲಿ ಅದಮ್ಯ ಆಸಕ್ತಿ. ಇದರಿಂದಲೇ ಉಸ್ಮಾನಿಯಾ ಯುನಿವರ್ಸಿಟಿ ಕಾಲೇಜಿನಿಂದ ಇಂಗ್ಲಿಷ್ನಲ್ಲಿ ಎಂಎ ಪದವಿಯನ್ನು ಪಡೆದರು.
ಓದಿನಲ್ಲಿ ಮುಂದಿದ್ದರೂ ಸಾಯಿಶಿಲ್ಪಿಗೆ ಆರ್ಥಿಕ ಪರಿಸ್ಥಿತಿಗಳಿಂದ ಅನೇಕ ತೊಡಕುಗಳನ್ನು ಎದುರಿಸುವಂತೆ ಆಯಿತು. ಇದೇ ಕಾರಣಕ್ಕೆ ಮನೆ ಮತ್ತು ಓದಿಗೆ ಸಹಾಯಕವಾಗಲಿದೆ ಎಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಆರಂಭಿಸಿದರು. ನಾಗರಿಕ ಸೇವೆ ವೃತ್ತಿ ಜೀವನದ ಮೇಲೆ ಕಣ್ಣಿಟ್ಟ ಅವರು ಇದರ ಜೊತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಮುಂದಾದರು.
ಸಾಯಿಶಿಲ್ಪಿ ಅವರ ಶ್ರದ್ಧೆ ಮತ್ತು ಕಠಿಣ ಶ್ರಮಕ್ಕೆ ಕೊನೆಗೂ ಅದ್ಬುತ ಫಲ ಸಿಕ್ಕಿದೆ. ಒಂದು ಕೆಲಸಕ್ಕೆ ಗುರಿಯಿಟ್ಟ ಸಾಯಿಶಿಲ್ಪಿ ಒಟ್ಟೊಟ್ಟಿಗೆ ನಾಲ್ಕು ಸರ್ಕಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸ ಪಡೆದಿದ್ದಾರೆ. ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕಿ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆದಿದ್ದಾರೆ. ಜೊತೆಗೆ ರಾಜ್ಯದ ಜೂನಿಯರ್ ಲೆಕ್ಚರ್ ಹುದ್ದೆಗೂ ಆಯ್ಕೆಯಾಗಿದ್ದಾರೆ.