ನವದೆಹಲಿ:2024ರ ಲೋಕಸಭೆ ಚುನಾವಣೆಯ ಬಳಿಕ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಬಿರುಕು ಮೂಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಭೆ ಕೇರಳದ ಪಾಲಕ್ಕಾಡ್‌ನಲ್ಲಿ ಅಕ್ಟೋಬರ್ 31ರಿಂದ ಆರಂಭವಾಗಲಿದೆ. ಇದರಲ್ಲಿ ಬಿಜೆಪಿ ಸೇರಿದಂತೆ ಆರ್ಎಸ್ಎಸ್ನ ಅಂಗಸಂಸ್ಥೆಗಳು ಭಾಗವಹಿಸಲಿವೆ.
ಈ ಬಗ್ಗೆ ಮಂಗಳವಾರ ಪ್ರಕಟಣೆ ಬಿಡುಗಡೆ ಮಾಡಿರುವ ಆರ್‌ಎಸ್‌ಎಸ್ ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್, ಅಕ್ಟೋಬರ್ 31ರಿಂದ ಸೆಪ್ಟೆಂಬರ್ 2ರ ವರೆಗೆ ಮೂರು ದಿನಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ ಅನ್ನು ಕೇರಳದ ಪಾಲಕ್ಕಾಡ್‌ನಲ್ಲಿ ಆಯೋಜಿಸಲಾಗಿದೆ. ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಆರು ಜಂಟಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೈಠಕ್ನಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ), ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ, ವಿದ್ಯಾಭಾರತಿ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ 32 ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.