ಹೈದರಾಬಾದ್/ನರಸಾಪುರ (ತೆಲಂಗಾಣ):ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಸಿಗುವವರೆಗೆ ನಿರುದ್ಯೋಗಿಗಳಿಗೆ ಮಾಸಿಕ 8,500 ರೂ. ಟ್ರೈನಿಂಗ್ ಸ್ಟೈಫಂಡ್ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ನರಸಾಪುರದಲ್ಲಿ ಗುರುವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಪದವೀಧರರು ಮತ್ತು ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ದಿನಗೂಲಿಯನ್ನು 400 ರೂ.ಗೆ ಹೆಚ್ಚಿಸುತ್ತೇವೆ" ಎಂದು ತಿಳಿಸಿದರು. ದೇಶದಲ್ಲಿ ಎರಡು ಗುಂಪುಗಳ ನಡುವೆ ಲೋಕಸಭೆ ಚುನಾವಣೆ ನಡೆಯುತ್ತಿದೆ. ಒಂದು ಗುಂಪು ಸಂವಿಧಾನವನ್ನು ರಕ್ಷಿಸಲು ಬಯಸುತ್ತದೆ. ಮತ್ತೊಂದು ಗುಂಪಿಗೆ ಸಂವಿಧಾನದ ಅಗತ್ಯವಿಲ್ಲ ಮತ್ತು ಆ ಗುಂಪು ರದ್ದುಪಡಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣೆಗೆ ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಅವರು, ''ಶಿಕ್ಷಣ, ಉದ್ಯೋಗ ಮತ್ತು ಮತದಾನದ ಹಕ್ಕು ಸಂವಿಧಾನದ ಮೂಲಕವೇ ನಮಗೆ ದೊರೆತಿದೆ. ಆದ್ರೆ, ಸಂವಿಧಾನದ ಜೊತೆಗೆ ಮೀಸಲಾತಿಯನ್ನು ರದ್ದುಪಡಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಮೀಸಲಾತಿ ರದ್ದುಪಡಿಸಲು ಬಿಜೆಪಿ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ'' ಎಂದು ಗಂಭೀರ ಆರೋಪಿಸಿದರು.
ಬಿಜೆಪಿಯ ಷಡ್ಯಂತ್ರಗಳ ವಿರುದ್ಧ ಹೋರಾಟ:''ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರಾಟ ಮಾಡುವುದು ಮತ್ತು ಅವುಗಳನ್ನು ಖಾಸಗೀಕರಣಗೊಳಿಸುವುದು, ಜೊತೆಗೆ ಕ್ರಮೇಣ ಖಾಸಗೀಕರಣವನ್ನು ಹೆಚ್ಚಿಸುವುದು ಮತ್ತು ಮೀಸಲಾತಿಯನ್ನು ರದ್ದುಗೊಳಿಸುವುದು ಬಿಜೆಪಿಯ ಆಲೋಚನೆಯಾಗಿದೆ. ಬಿಜೆಪಿ ಸರ್ಕಾರ ಸಂವಿಧಾನ ಬದಲಿಸಿ, ಮೀಸಲಾತಿ ರದ್ದು ಪಡಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿಯ ಷಡ್ಯಂತ್ರಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಬಡವರಿಗೆ ಸಂವಿಧಾನದ ಮೂಲಕ ಎಲ್ಲ ಹಕ್ಕುಗಳು ಸಿಗುತ್ತವೆ'' ಎಂದರು.
''ದೇಶದಲ್ಲಿ ಶೇ.90ರಷ್ಟು ಎಸ್‌ಸಿ, ಎಸ್‌ಟಿ, ಬಿಸಿಗಳಿದ್ದರೂ ಅವರ ನಾಯಕರು ರಾಜಕೀಯದಲ್ಲಿಲ್ಲ, ಹಿಂದುಳಿದ ಸಮುದಾಯಕ್ಕೆ ಸೇರಿದವರ ಸಂಖ್ಯೆ ಮೊದಲು ಲೆಕ್ಕ ಹಾಕಬೇಕು. ಇದರಿಂದ ಜನಗಣತಿ ನಡೆಯಬೇಕಿದೆ'' ಎಂದು ಆಗ್ರಹಿಸಿದರು. ದುರ್ಬಲ ವರ್ಗದವರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ'' ಎಂದ ಅವರು, ''ದೇಶದ ಸಂಪತ್ತೆಲ್ಲ ಕೇವಲ ಶೇಕಡಾ ಎರಡರಷ್ಟು ಇರುವ ಕೋಟ್ಯಾಧಿಪತಿಗಳ ಕೈ ಸೇರುತ್ತಿದ್ದು, ಜಗತ್ತಿನ ಯಾವ ಸರ್ಕಾರವೂ ಖಾಸಗಿ ವಲಯಕ್ಕೆ ಇಷ್ಟೊಂದು ಪ್ರೋತ್ಸಾಹ ನೀಡಿಲ್ಲ'' ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ರ್‍ಯಾಲಿಯಲ್ಲಿ ಮೋದಿ ವಿರುದ್ಧ ವಾಗ್ದಾಳಿ:ರಾಹುಲ್ ಗಾಂಧಿ ರಂಗಾರೆಡ್ಡಿ ಜಿಲ್ಲೆಯ ಸರೂರ್ ನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ''ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ರಾಜ್ಯದಲ್ಲಿರುವ ಬಡವರ ವಿವರ ಸಂಗ್ರಹಿಸಲಾಗುವುದು. ಪ್ರತಿ ಬಡ ಕುಟುಂಬದಲ್ಲಿ ಒಬ್ಬ ಮಹಿಳೆಯ ಖಾತೆಗೆ ರೂ.1 ಲಕ್ಷ ಜಮಾ ಮಾಡುತ್ತೇವೆ. ಮೋದಿ 10 ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಮೋದಿಯವರು ಶ್ರೀಮಂತರಿಗೆ ಕೊಟ್ಟ ಹಣವನ್ನು ಬಡ ಮಹಿಳೆಯರ ಖಾತೆಗೆ ಹಾಕುತ್ತೇವೆ'' ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮೈಕ್ ಬಳಸದೇ, ಟಾರ್ಚ್ ಲೈಟ್ ಬೆಳಕಿನಲ್ಲೇ ಪ್ರಿಯಾಂಕಾ ಗಾಂಧಿ ಮತಬೇಟೆ: ಕಾರಣವೇನು ಗೊತ್ತಾ? - Priyanka Gandhi