ಚಂಡೀಗಢ: ಪಂಜಾಬಿನಲ್ಲಿ ರೈತರ ಪ್ರತಿಭಟನೆ ಮೂರನೇ ದಿನವಾದ ಭಾನುವಾರವೂ ಮುಂದುವರಿದಿದೆ. ಈ ಬಗ್ಗೆ ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, "ಯಾವುದೇ ವಿಷಯವಿರಲಿ ಅದು ಅತಿಯಾದರೆ ಒಳ್ಳೆಯದಲ್ಲ, ಸೂಕ್ತ ಕಾರಣಗಳಿಲ್ಲದೆ ಪ್ರತಿದಿನ ರಸ್ತೆಗಳನ್ನು ಬಂದ್ ಮಾಡುವುದು ಸಮರ್ಥನೀಯವಲ್ಲ" ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಏನು ಕಾರಣ?: ನಿಧಾನಗತಿಯಲ್ಲಿ ಭತ್ತ ಖರೀದಿ ಮತ್ತು ರಸಗೊಬ್ಬರಗಳ ಕೊರತೆ ವಿರೋಧಿಸಿ ರಾಜ್ಯದ ಪ್ರಮುಖ ರೈತ ಸಂಘಟನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಮೂರನೇ ದಿನವೂ ರಸ್ತೆಗಳನ್ನು ಬಂದ್ ಮಾಡಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಇದರಿಂದ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ನಾಗರಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಅಕ್ಟೋಬರ್ 26ರಿಂದ ರಾಜ್ಯದ ಅನೇಕ ಕಡೆಗಳಲ್ಲಿ ಅನಿರ್ದಿಷ್ಟಾವಧಿಗೆ ರಸ್ತೆ ತಡೆ ನಡೆಸುವುದಾಗಿ ಸರ್ವನ್ ಸಿಂಗ್ ಪಂಧೇರ್ ನೇತೃತ್ವದ ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿದ್ದು, ಮುಂದಿನ ದಿನಗಳಲ್ಲಿಯೂ ಜನರಿಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ರಸಗೊಬ್ಬರ ದಾಸ್ತಾನು ಪ್ರಮಾಣವನ್ನು ಶೇಕಡಾ 30ರಷ್ಟು ಕಡಿಮೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಭಟನಾಕಾರರು ಖಂಡಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಡಿಎಪಿ ಪೂರೈಸುವಂತೆ ಅವರು ಒತ್ತಾಯಿಸುತ್ತಿದ್ದಾರೆ.