ಕನೌಜ್(ಉತ್ತರ ಪ್ರದೇಶ): ತಪ್ಪಾದ ರಸ್ತೆಯ ಭಾಗದಲ್ಲಿ ಬರುತ್ತಿದ್ದ ಟ್ಯಾಂಕರ್‌ಗೆ ಖಾಸಗಿ ಸ್ಲೀಪರ್ ಬಸ್ ಡಿಕ್ಕಿ ಹೊಡೆದು 8 ಜನ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಲಕ್ನೋ-ಆಗ್ರಾ ಹೆದ್ದಾರಿಯಲ್ಲಿ ಇಂದು ನಡೆದಿದೆ. ಏಳು ಜನ ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
19 ಜನರು ಗಾಯಗೊಂಡಿದ್ದು, ಸೈಫಾಯಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್‌ಪಿ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸ್ಲೀಪರ್ ಬಸ್ ಲಕ್ನೋದಿಂದ ಆಗ್ರಾದತ್ತ ಹೋಗುತ್ತಿತ್ತು. ಖಾಸಗಿ ಬಸ್ ರಾಂಗ್ ಸೈಡ್ನಿಂದ ಬರುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿಯಾಗಿದೆ. ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಕ್ಕಪಕ್ಕದವರ ಸಹಾಯದಿಂದ ಬಸ್‌ನಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸೈಫಾಯಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೀರು ತುಂಬಿದ ಟ್ಯಾಂಕರ್ ಮರಗಳಿಗೆ ನೀರು ಹಾಕುತ್ತಾ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಅಪಘಾತದ ನಡೆದಾಗ ಸಚಿವ ಸ್ವತಂತ್ರ ದೇವ್ ಸಿಂಗ್ ಅವರ ಬೆಂಗಾವಲು ಪಡೆ ಅದೇ ಸ್ಥಳದಲ್ಲಿತ್ತು. ತಕ್ಷಣ ರಕ್ಷಣೆಗೆ ಧಾವಿಸಿ ಪೊಲೀಸರೊಂದಿಗೆ ಸೇರಿ ಬಸ್‌ನಿಂದ ಜನರನ್ನು ಹೊರತೆಗೆಯುವಲ್ಲಿ ಸಹಕರಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಪ್ರೊಬೆಷನರಿ ಸೇವೆಗೆ ವರದಿ ಮಾಡಿಕೊಳ್ಳಲು ತೆರಳುವಾಗ ಅಪಘಾತ; ಯುವ ಐಪಿಎಸ್ ಅಧಿಕಾರಿ ಸಾವು!