ಸಿಕರ್ (ರಾಜಸ್ಥಾನ): ಸಿಕರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದುವೆ ಮುಗಿಸಿ ವಧುವಿನೊಂದಿಗೆ ಮನೆಗೆ ಮರಳುತ್ತಿದ್ದ ವರನ ಕಾರು ಡಂಪರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಧು ಸ್ಥಳದಲ್ಲೇ ಸಾವನ್ನಪ್ಪಿದ್ದು, ವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಅಪಘಾತದ ಮಾಹಿತಿ ತಿಳಿದ ಸಂಬಂಧಿಕರ ಮನೆಯಲ್ಲಿ ಮೌನ ಮಡುಗಟ್ಟಿದೆ. ಈ ಅಪಘಾತದಿಂದ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಗಾಯಗೊಂಡ ವರನನ್ನು ಸ್ಥಳೀಯ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದ್ದರಿಂದ ಸಿಕರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಡಿವೈಡರ್ಗೆ ಡಿಕ್ಕಿ ಹೊಡೆದ ಮದುವೆ ಕಾರು ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಫತೇಪುರ್ ಪ್ರದೇಶದ ಹೆದ್ದಾರಿ ಸಂಖ್ಯೆ 58ರಲ್ಲಿ ಮರ್ದಾಟು ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಠಾಣಾಧಿಕಾರಿ ಕೃಷ್ಣ ಕುಮಾರ್ ಧನಖರ್ ತಿಳಿಸಿದ್ದಾರೆ. ಮುದುವೆಯ ವಾಹನ ಲಕ್ಷ್ಮಣಗಢ ಪ್ರದೇಶದ ಬಟಾನೌ ಗ್ರಾಮದಿಂದ ಹರಿಯಾಣದ ಸಿರ್ಸಾಕ್ಕೆ ಹೋಗಿತ್ತು. ರಾತ್ರಿ ಮದುವೆ ಮುಗಿಸಿ ವಧುವರರು ಬಟಾನೌಗೆ ಮರಳುತ್ತಿದ್ದರು. ಇದೇ ವೇಳೆ ವರನ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಕಾರು ಡಂಪರ್‌ಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದ ಸುದ್ದಿ ಕೇಳಿದವರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ವಧುವರರನ್ನು ರಕ್ತದ ಮಡುವಿನಲ್ಲಿ ಕಂಡು ಆಘಾತಕ್ಕೊಳಗಾದರು. ರಘುವೀರ್ ಜಾಟ್ ಅವರ ಪುತ್ರ ವರ ನರೇಂದ್ರ ಅವರು ಬಟಾನೌ ನಿವಾಸಿಯಾಗಿದ್ದು, ವಧು ಖುಷ್ಬೂ ಅಲಿಯಾಸ್ ರೇಖಾ ಹರಿಯಾಣದ ಸಿರ್ಸಾ ಜಿಲ್ಲೆಯ ತಾಜಿಯಖೇಡಾ ಗ್ರಾಮದ ನಿವಾಸಿಯಾಗಿದ್ದಾರೆ.
ಓದಿ:ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನ ಯಶಸ್ವಿ ರಕ್ಷಣೆ: ಫಲ ನೀಡಿದ 9 ಗಂಟೆಗಳ ಕಾರ್ಯಾಚರಣೆ