ಕರ್ನಾಟಕ

karnataka

ETV Bharat / bharat

ಆರ್​ಬಿಐ ಮಾರ್ಗಸೂಚಿ: ಕೆವೈಸಿ ನೆಪದಲ್ಲಿ ವಂಚನೆ ತಡೆಗೆ ಹೀಗೆ ಮಾಡಿ.. - ಸೈಬರ್ ವಂಚನೆ

ಕೆವೈಸಿ ಹೆಸರಲ್ಲಿ ವಂಚನೆ ತಡೆಗಟ್ಟಲು ಆರ್​ಬಿಐ ಕೆಲ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ.

RBI issues warning against fraud through KYC trick
RBI issues warning against fraud through KYC trick

By ETV Bharat Karnataka Team

Published : Feb 2, 2024, 8:08 PM IST

ಮುಂಬೈ: ಕೆವೈಸಿ ನವೀಕರಣ ಮಾಡಿಸುವ ನೆಪದಲ್ಲಿ ವಂಚನೆ ಮಾಡುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಗ್ರಾಹಕರಿಗೆ ಫೋನ್ ಕರೆ, ಎಸ್ಎಂಎಸ್, ಇಮೇಲ್​ ಸೇರಿದಂತೆ ಅನಪೇಕ್ಷಿತ ಕರೆಗಳನ್ನು ಮಾಡುವ ಮೂಲಕ ಇಂಥ ವಂಚನೆಗಳನ್ನು ಎಸಗಲಾಗುತ್ತಿದೆ.

ಈ ಮೂಲಕ ವಂಚಕರು ವೈಯಕ್ತಿಕ ಮಾಹಿತಿ, ಖಾತೆ / ಲಾಗಿನ್ ವಿವರಗಳನ್ನು ಬಹಿರಂಗಪಡಿಸುವಂತೆ ಅಥವಾ ಸಂದೇಶಗಳಲ್ಲಿ ಒದಗಿಸಲಾದ ಲಿಂಕ್​ಗಳ ಮೂಲಕ ಅನಧಿಕೃತ ಅಥವಾ ವೆರಿಫೈ ಆಗದ ಅಪ್ಲಿಕೇಶನ್​ಗಳನ್ನು ಇನ್​ಸ್ಟಾಲ್ ಮಾಡಿಕೊಳ್ಳುವಂತೆ ಚಾಕಚಕ್ಯತೆಯಿಂದ ವರ್ತಿಸುತ್ತಾರೆ ಎಂದು ಆರ್​ಬಿಐ ಹೇಳಿದೆ.

ಅಂಥ ಸಂವಹನಗಳ ಸಮಯದಲ್ಲಿ ಸಾಮಾನ್ಯವಾಗಿ ಸುಳ್ಳು ತುರ್ತುಸ್ಥಿತಿಯನ್ನು ಸೃಷ್ಟಿಸುವ ತಂತ್ರಗಳನ್ನು ವಂಚಕರು ಬಳಸುತ್ತಾರೆ ಮತ್ತು ಗ್ರಾಹಕರು ತಾವು ಹೇಳಿದಂತೆ ಮಾಡಲು ವಿಫಲವಾದರೆ ಖಾತೆ ಸ್ಥಗಿತವಾಗಬಹುದು ಅಥವಾ ನಿರ್ಬಂಧಕ್ಕೊಳಗಾಗಬಹುದು ಎಂದು ಬೆದರಿಕೆ ಹಾಕುತ್ತಾರೆ. ಗ್ರಾಹಕರು ಅಗತ್ಯ ವೈಯಕ್ತಿಕ ಅಥವಾ ಲಾಗಿನ್ ವಿವರಗಳನ್ನು ಹಂಚಿಕೊಂಡಾಗ ವಂಚಕರು ಅವರ ಖಾತೆಗಳಿಗೆ ಅನಧಿಕೃತ ಪ್ರವೇಶ ಪಡೆಯುತ್ತಾರೆ ಮತ್ತು ಮೋಸದ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಹಣಕಾಸು ಸೈಬರ್ ವಂಚನೆಗಳ ಸಂದರ್ಭದಲ್ಲಿ, ಸಾರ್ವಜನಿಕರು ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅಥವಾ ಸೈಬರ್ ಕ್ರೈಮ್ ಸಹಾಯವಾಣಿ (1930) ಮೂಲಕ ದೂರು ದಾಖಲಿಸಬೇಕು ಎಂದು ಆರ್​ಬಿಐ ಹೇಳಿದೆ. ಇದಲ್ಲದೇ, ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಾರ್ವಜನಿಕರು ಅಳವಡಿಸಿಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಆರ್​ಬಿಐ ಪ್ರಕಟಿಸಿದೆ. ಅವು ಹೀಗಿವೆ:

ಹೀಗೆ ಮಾಡಿ:

  • ಕೆವೈಸಿ ಅಪ್ಡೇಟ್​ಗಾಗಿ ಯಾವುದೇ ವಿನಂತಿ ಬಂದಾಗ ದೃಢೀಕರಣ / ಸಹಾಯಕ್ಕಾಗಿ ನೇರವಾಗಿ ತಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬೇಕು.
  • ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಗ್ರಾಹಕ ಫೋನ್ ಸಂಖ್ಯೆಯನ್ನು ಅದರ ಅಧಿಕೃತ ವೆಬ್​ಸೈಟ್​ ಅಥವಾ ಮೂಲಗಳ ಮೂಲಕ ಮಾತ್ರ ಪಡೆಯಿರಿ.
  • ಯಾವುದೇ ಸೈಬರ್ ವಂಚನೆ ಘಟನೆ ಸಂಭವಿಸಿದಲ್ಲಿ ತಕ್ಷಣ ತಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ತಿಳಿಸಿ.
  • ಕೆವೈಸಿ ವಿವರಗಳನ್ನು ಅಪ್ಡೇಟ್​ ಮಾಡಲು ಲಭ್ಯವಿರುವ ವಿಧಾನಗಳು ಅಥವಾ ಆಯ್ಕೆಗಳನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಶಾಖೆಯೊಂದಿಗೆ ವಿಚಾರಿಸಿ.
  • ಕೆವೈಸಿ ಅಪ್ಡೇಟ್ ಅಥವಾ ಆವರ್ತಕ ಅಪ್ಡೇಟ್ ಅವಶ್ಯಕತೆಗಳು ಮತ್ತು ಮಾರ್ಗಗಳ ಬಗ್ಗೆ ಹೆಚ್ಚಿನ ವಿವರಗಳು ಅಥವಾ ಹೆಚ್ಚುವರಿ ಮಾಹಿತಿಗಾಗಿ, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಫೆಬ್ರವರಿ 25, 2016 ರ ಕೆವೈಸಿ ಕುರಿತ ಆರ್​ಬಿಐ ಮಾಸ್ಟರ್ ಡೈರೆಕ್ಷನ್​ನ ಪ್ಯಾರಾ 38 ಅನ್ನು ಓದಿ.

ಹೀಗೆ ಮಾಡಬೇಡಿ:

  • ಖಾತೆ ಲಾಗಿನ್ ವಿವರ, ಕಾರ್ಡ್ ಮಾಹಿತಿ, ಪಿನ್​ಗಳು, ಪಾಸ್​ವರ್ಡ್​, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಕೆವೈಸಿ ದಾಖಲೆಗಳು ಅಥವಾ ಕೆವೈಸಿ ದಾಖಲೆಗಳ ನಕಲುಗಳನ್ನು ಹಂಚಿಕೊಳ್ಳಬೇಡಿ.
  • ಪರಿಶೀಲಿಸದ ಅಥವಾ ಅನಧಿಕೃತ ವೆಬ್​ಸೈಟ್​ಗಳು ಅಥವಾ ಅಪ್ಲಿಕೇಶನ್​ಗಳ ಮೂಲಕ ಯಾವುದೇ ಸೂಕ್ಷ್ಮ ಡೇಟಾ / ಮಾಹಿತಿಯನ್ನು ಹಂಚಿಕೊಳ್ಳಬೇಡಿ.
  • ಮೊಬೈಲ್ ಅಥವಾ ಇಮೇಲ್​ನಲ್ಲಿ ಬಂದ ಅನುಮಾನಾಸ್ಪದ ಅಥವಾ ಪರಿಶೀಲಿಸದ ಲಿಂಕ್​ಗಳನ್ನು ಕ್ಲಿಕ್ ಮಾಡಬೇಡಿ.

ಇದನ್ನೂ ಓದಿ : ಬೋಟ್ ಸಂಸ್ಥೆಯಲ್ಲಿ ನಟ ರಣವೀರ್ ಸಿಂಗ್​​ ಭಾರೀ ಹೂಡಿಕೆ

ABOUT THE AUTHOR

...view details