ಬೆಂಗಳೂರು : ''ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ 13 ಎಕರೆಯನ್ನು ಖಾಸಗಿಗೆ ಹಸ್ತಾಂತರಿಸುವ ಅವ್ಯವಹಾರವೊಂದು ನಡೆದಿದೆ. ಕರ್ನಾಟಕದ ಜನರ ಆಸ್ತಿಯ ಲೂಟಿ ಮಾಡಲಾಗುತ್ತಿದೆ. ಇದು ಆರು ನೂರು ಕೋಟಿ ಬೆಲೆ ಬಾಳುವ ಭೂಮಿಯಾಗಿದೆ. ಈ ಬಗ್ಗೆ ಕೇಂದ್ರದ ಸಚಿವರೇಕೆ ಸುಮ್ಮನಿದ್ದಾರೆ? ಪ್ರಧಾನಮಂತ್ರಿ, ರೈಲ್ವೆ ಸಚಿವರೂ ಕೂಡ ಏಕೆ ಸುಮ್ಮನಿದ್ದಾರೆ'' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸಂಬಂಧ ಶುಕ್ರವಾರ ನಡೆದ ಸಭೆ ಬಳಿಕ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿದರು. ''ಹುಬ್ಬಳ್ಳಿ ರೈಲ್ವೆ ಭೂಮಿ ಹಗರಣವು 40 ಪರ್ಸೆಂಟ್ ಕಮಿಷನ್ ಅವ್ಯವಹಾರದ ಮುಂದುವರಿದ ಭಾಗವಾಗಿದೆ. ಬಿಜೆಪಿ ನಾಯಕರು ಇದರ ಬಗ್ಗೆ ಉತ್ತರ ನೀಡಬೇಕು. ಸುಮಾರು 1,300 ಕೋಟಿ ರೂ. ಹಗರಣ ಇದಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮೌನವಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಹ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. 13 ಎಕರೆ ರೈಲ್ವೆ ಕ್ವಾಟ್ರಸ್ ಅನ್ನು ಏಕಾಏಕಿ ನೆಲಸಮ ಮಾಡಿ ಅದನ್ನು ಇ-ಟೆಂಡರ್ ಮೂಲಕ 99 ವರ್ಷ ಲೀಸ್ ಕೊಡಲು ಅಂದರೆ ಪರೋಕ್ಷವಾಗಿ ಮಾರಾಟ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈ ಜಮೀನಿಗೆ ಮಾರುಕಟ್ಟೆ ದರದ ಪ್ರಕಾರ ಒಂದು ಚದರ್ ಅಡಿಗೆ 25 ಸಾವಿರ ರೂಪಾಯಿ ಇದೆ'' ಎಂದರು.
ಸ್ಕ್ರೀನಿಂಗ್ ಕಮಿಟಿ :ಲೋಕಸಭೆ ಚುನಾವಣೆಯಲ್ಲಿಸಚಿವರು ಸ್ಪರ್ಧೆ ಮಾಡುವ ಬಗ್ಗೆ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ನಿರ್ಧಾರ ಆಗಲಿದೆ. ಕ್ಷೇತ್ರವಾರು ಇನ್ನೊಮ್ಮೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬ್ಲಾಕ್, ಜಿಲ್ಲಾ ಘಟಕಗಳು ಹಾಗೂ ಶಾಸಕರು, ಪ್ರಮುಖರ ಅಭಿಪ್ರಾಯ ಕೇಳುತ್ತಾರೆ. ವೀಕ್ಷಕರು 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೊಟ್ಟರು. ಶನಿವಾರ ಸಂಜೆಯೊಳಗೆ ಅಭ್ಯರ್ಥಿಗಳ ಕುರಿತು ವಿವರಣೆ ಕೊಡಲು ಸೂಚಿಸಲಾಗಿದೆ. ಜಿಲ್ಲೆಗಳಿಗೆ ಹೋಗಿ ಕಾರ್ಯದರ್ಶಿಗಳು ಪ್ರತ್ಯೇಕ ಸರ್ವೆ ಮಾಡಲಿದ್ದಾರೆ. ಸರ್ವೆ ತಂಡ ಕೆಲಸ ಮಾಡಲಿದೆ. ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಶುಕ್ರವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ, 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳು, ಕ್ಷೇತ್ರದ ಗ್ರೌಂಡ್ ರಿಪೋರ್ಟ್, ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಪಕ್ಷಾವಾರು ಫಲಿತಾಂಶ ಸೇರಿದಂತೆ ವಿವಿಧ ಮಾಹಿತಿಯಿರುವ ವರದಿಯನ್ನು ಸಲ್ಲಿಸಿದ್ದಾರೆ.