ಹೈದರಾಬಾದ್: ಮಾಧ್ಯಮ ಲೋಕದ ದಿಗ್ಗಜ, ಈನಾಡು ಸಮೂಹದ ಅಧ್ಯಕ್ಷ ರಾಮೋಜಿ ರಾವ್ ಅವರು ತಮ್ಮ ಜೀವಿತಾವಧಿಯಲ್ಲಿ ದೊಡ್ಡ ಮಾಧ್ಯಮ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಸಾವಿರಾರು ಉದ್ಯೋಗಿಗಳು ರಾಮೋಜಿ ಸಮೂಹದ ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ, ಆತಿಥ್ಯ, ಚಲನಚಿತ್ರಗಳು, ಮನರಂಜನೆ ಹಾಗೂ ಎಫ್ಎಂಸಿಜಿ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಮಾಧ್ಯಮದ ಮೊಗಲ್ ರಾಮೋಜಿ ರಾವ್ ಜವಾಬ್ದಾರಿಗಳ ಉಯಿಲು ಬರೆದಿದ್ದಾರೆ.
ರಾಮೋಜಿ ರಾವ್ ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಸುವ ತಮ್ಮ ಸಮೂಹ ಸಂಸ್ಥೆಗಳ ಉದ್ಯೋಗಿಗಳಿಗೆ ಅವರು ಬರೆದ ಸ್ಫೂರ್ತಿದಾಯಕ ಉಯಿಲು ಇಲ್ಲಿದೆ.
ಪ್ರತಿಯೊಬ್ಬ ಉದ್ಯೋಗಿಯೂ ಸಮರ್ಥ ಮತ್ತು ಬದ್ಧತೆಯ ಸೈನಿಕನಾಗಿ ಮುನ್ನಡೆಯಬೇಕು. ಸೃಜನಶೀಲತೆಯಿಂದ ಸವಾಲುಗಳನ್ನು ಜಯಿಸಬೇಕು. ನಾನು ಸ್ಥಾಪಿಸಿದ ಸಂಸ್ಥೆಗಳು ಶಾಶ್ವತವಾಗಿ, ದೃಢವಾಗಿ ನಿಲ್ಲಲು ನೀವೇ ಅಡಿಪಾಯ.
ನನ್ನ ಜೀವನದ ಬಾಂದಳದಲ್ಲಿ ಮೋಡಗಳು ಕವಿಯುತ್ತಿವೆ- 'ಅದು ಮಳೆ ಬರುವುದಕ್ಕೋ, ಬಿರುಗಾಳಿ ಬೀಸುವುದಕ್ಕೋ ಅಲ್ಲ. ನನ್ನ ಬದುಕಿನ ಸಂಧ್ಯಾಕಾಲಕ್ಕೆ ಹೊಸ ಬಣ್ಣ ಬಳಿಯಲು' ಎಂದು ವಿಶ್ವಕವಿ ರವೀಂದ್ರನಾಥ್ ಠಾಗೋರ್ ಹೇಳಿದ್ದಾರೆ. ದಶಕಗಳ ಕಾಲ ಸೂರ್ಯನ ಮೊದಲ ಕಿರಣಗಳ ಚೈತನ್ಯದ ಸ್ಫೂರ್ತಿಯನ್ನು ಪ್ರತಿನಿತ್ಯವೂ ನನ್ನ ಹೃದಯಾಂತರಾಳದಲ್ಲಿರಿಸಿ, ಸಪ್ತಾಶ್ವ ರಥರೂಢನ ಕಾಲದ ವೇಗದೊಂದಿಗೆ ಸೃಜನಶೀಲತೆಗೆ ಸಾಣೆ ಹಿಡಿದು, ದಶಕಗಳ ಅಂತರ ತಿಳಿಯದಂತೆಯೇ ನಿರಂತರವಾಗಿ ದಣಿವಿರದಂತೆ ಓಡಿದ ನನಗೀಗ ವಿಶ್ವಕವಿಯ ಈ ಮೇಲಿನ ಮಾತುಗಳು ನೆನಪಿಗೆ ಬರುತ್ತಿವೆ.
ನನಗೆ ವಯಸ್ಸಾದರೂ 'ಬದಲಾವಣೆಯೇ ನಿತ್ಯ, ಬದಲಾವಣೆಯೇ ಸತ್ಯ' ಎಂದು ಕೂಗುವ ನನ್ನ ಮನಸ್ಸು ಹೊಸ ಆಲೋಚನೆಗಳಿಂದ ತುಂಬಿ ತುಳುಕುತ್ತಲೇ ಇರುತ್ತದೆ. ರಾಮೋಜಿ ಗ್ರೂಪ್ ಕುಟುಂಬದ ಹಿರಿಯನಾಗಿ, ನಿಮ್ಮೆಲ್ಲರನ್ನು ಉದ್ದೇಶಿಸಿ ಈ ಪತ್ರ ಬರೆಯಲು ನನ್ನನ್ನು ಪ್ರೇರೇಪಿಸಿತು. ಇದೊಂದು ರೀತಿಯಲ್ಲಿ ಭವಿಷ್ಯದ ಪ್ರಣಾಳಿಕೆ. ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಸಿಬ್ಬಂದಿಯಾದ ನಿಮಗೆಲ್ಲರಿಗೂ ದೊಡ್ಡ ಗುರಿಗಳ ಕೈಪಿಡಿ.
ವ್ಯಕ್ತಿಯ ಬಹುಮುಖವೇ ಶಕ್ತಿ. ಎಲ್ಲಾ ರಾಮೋಜಿ ಗ್ರೂಪ್ ಕಂಪನಿಗಳು ನನ್ನ ಆಲೋಚನೆಗಳ ಕೂಸುಗಳಾಗಿದ್ದರೂ, ಅವೆಲ್ಲವೂ ಲಕ್ಷಾಂತರ ಜನರು ಪ್ರೀತಿಸುವ ಶಕ್ತಿಯುತ ಸಂಸ್ಥೆಗಳಾಗಿ ಬೆಳೆದಿವೆ. ಆಯಾ ಸಂಸ್ಥೆಗಳ ಅಭಿವೃದ್ಧಿಯಲ್ಲಿ ನೇರ ಪಾತ್ರ ವಹಿಸಿದ, ವೃತ್ತಿಪರ ಮೌಲ್ಯಗಳಿಗೆ ಮೀಸಲಾಗಿರುವ ಮತ್ತು ಸಮಾಜದಲ್ಲಿ ಮನೆಮಾತಾಗಿರುವ ಅನೇಕ ಉದ್ಯೋಗಿಗಳು ನನಗೆ ಗೊತ್ತು. ರಾಮೋಜಿ ಗ್ರೂಪ್ ಆಫ್ ಕಂಪನಿಗಳಲ್ಲಿ ಕೆಲಸ ಮಾಡುವುದು ಎಷ್ಟು ಗೌರವವೋ, ಅಷ್ಟೇ ಗೌರವ ಸಾಟಿಯಿಲ್ಲದ ಶಿಸ್ತು, ಸಮಯಪಾಲನೆ, ಕೆಲಸದ ದಕ್ಷತೆಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಂಸ್ಥೆಯೊಂದಿಗೆ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿರುವ ವಿಶಿಷ್ಟ ಗುಣಗಳ ಸಿಬ್ಬಂದಿಯಿಂದ ಕೂಡಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ.
ಕಠಿಣ ಪರಿಶ್ರಮ ವ್ಯರ್ಥವಲ್ಲ - ಇದು ನಾನು ದಶಕಗಳಿಂದ ನಿಷ್ಠೆಯಿಂದ ಪಾಲಿಸಿಕೊಂಡಿರುವ ವ್ಯಾಪಾರ ತತ್ವ!. ಆದ್ದರಿಂದ ನನ್ನ ಎಲ್ಲ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿವೆ. ಜೊತೆಗೆ ವ್ಯಾಪಕವಾದ ಮಾನವ ಸಂಪನ್ಮೂಲ ಬಳಕೆ ಮತ್ತು ಕೆಲಸದ ಮಾನದಂಡಗಳೊಂದಿಗೆ ಉನ್ನತ ಮೌಲ್ಯಗಳಿಗೆ ಶಿಖರವಾಗಿದೆ. ದಶಕಗಳಿಂದ ನನ್ನ ಬೆನ್ನಿಗೆ ನಿಂತು ನನ್ನ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಸಹಾಯ ಮಾಡಿದ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು!