ರಾಮೇಶ್ವರಂ: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ರಾಮೇಶ್ವರಂ ಜಿಲ್ಲೆಯ ಥಂಗಚಿಮಟಂ ಬಳಿ ಇಂದು ಬೆಳಗ್ಗೆ ನಡೆದಿದೆ. ತಮಿಳುನಾಡಿನ ಸರ್ಕಾರಿ ಬಸ್ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ತಂದೆ ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತ ಕುಟುಂಬಸ್ಥರು ಕುಡಲಡಿ ಮೂಲದವರು ಎಂದು ತಿಳಿದುಬಂದಿದೆ. ರಾಜೇಶ್ (33), ಅವರ ಪುತ್ರಿಯರಾದ ದರ್ಶಿನಾ ರಾಣಿ (8), ಪ್ರಣವಿಕಾ (4) ಮತ್ತು ಸಂಬಂಧಿಕರಾದ ಸೆಂಥಿಕ್ ಮನೋಕರನ್ (70) ಹಾಗೂ ಅಂಗಲೇಶ್ವರಿ (58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಮೃತ ರಾಜೇಶ್ ಪತ್ನಿ ಪಂಡಿ ಸೆಲ್ವಿ ಮತ್ತು ಅವರ 12 ದಿನದ ಮಗು ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ರಾಜೇಶ್ ಪತ್ನಿ ಪಂಡೆ ಸೆಲ್ವಿ ಅವರಿಗೆ 12 ದಿನದ ಹಿಂದೆ ಹೆರಿಗೆಯಾಗಿತ್ತು. ನವಜಾತ ಶಿಶು ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೇಶ್, ಪತ್ನಿ ಮತ್ತು ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಂಬಂಧಿಕರು ಬಾಡಿಗೆ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದ್ದರು. ಕೂಸಿಗೆ ಚಿಕಿತ್ಸೆ ಕೊಡಿಸಿ ಬಳಿಕ ವಾಪಸ್ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಮೃತರ ಕುಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮಾಹಿತಿ ಪ್ರಕಾರ, ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ವಾಂತಿ ಮಾಡಿಕೊಂಡಿದ್ದಾರೆ. ಇದರಿಂದ ಬಸ್ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದರಿಂದ ಹಿಂದಿನಿಂದ ಬರುತ್ತಿದ್ದ ಕಾರು ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಬಸ್ ಮತ್ತು ಕಾರು ತಿರುಪತ್ತುರ್ನಿಂದ ರಾಮೇಶ್ವರಂ ಕಡೆ ತೆರಳುತ್ತಿದ್ದಾಗ ಅಪಘಾತ ಆಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: 2.21 ಲಕ್ಷ ಹುಣಸೆ ಬೀಜಗಳಲ್ಲಿ ಅರಳಿದ ಪರಿಸರ ಸ್ನೇಹಿ ಗಣಪ; ಬೆಳಗಾವಿಯಲ್ಲೊಂದು ವಿನೂತನ ಗಜಮುಖ - Eco friendly Ganesha