ಅಯೋಧ್ಯಾ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಇಡೀ ಸಮಾರಂಭದ ಕೇಂದ್ರ ಆಕರ್ಷಣೆಯಾದ ರಾಮ ಲಲ್ಲಾ ಮೂರ್ತಿ ಗರ್ಭ ಗುಡಿ ಪ್ರವೇಶಿಸಿದೆ. ನಗುಮೊಗದ ಬಾಲ ರಾಮನ ವಿಗ್ರಹದ ಮೊದಲ ಚಿತ್ರಗಳು ಬಹಿರಂಗಗೊಂಡಿವೆ. ಕನ್ನಡಿಗ, ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ದೇವರ ಮೂರ್ತಿಯು ಭಕ್ತರನ್ನು ಪರವಶಗೊಳಿಸುವಂತೆ ಇದೆ.
ಅಯೋಧ್ಯೆಯ ಮಂದಿರದಲ್ಲಿ ದೇವರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಿದ್ಧತೆಗಾಗಿ ಅಯೋಧ್ಯೆ ನಗರವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯವು ಮಂಗಳಕರ, ಪೌಶ್ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್ 2080, ಅಂದರೆ ಸೋಮವಾರದಂದು ಜರುಗಲಿದೆ. ಈ ನಿಟ್ಟಿನಲ್ಲಿ ಕಳೆದ ಮಂಗಳವಾರದಿಂದಲೇ ಆರು ದಿನಗಳ ವಿವಿಧ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಗಿದೆ.
ಇಂದು ಆಚರಣೆಯ ನಾಲ್ಕನೇ ದಿನವಾಗಿದೆ. ಭಗವಾನ್ ಶ್ರೀರಾಮನಿಗೆ ಕೇಸರದಿವಸ್ ಮತ್ತು ಘೃತದಿವಸ್ ಆಚರಣೆಗಳು ನೆರವೇರಿದವು. ಇದಾದ ಬಳಿಕ ಸಂಜೆ ಧಾನ್ಯದಿವಸ್ ಜರುಗಿತು. ಕಾಶಿಯ ವಿದ್ವಾಂಸರಾದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಮತ್ತು ಪಂಡಿತ್ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರೊಂದಿಗೆ ಆಗಮಿಸಿದ 121 ಆಚಾರ್ಯರು 4 ವೇದ ಮಂತ್ರಗಳ ನಡುವೆ ಇಂದಿನ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು.
ನಾಲ್ಕನೇ ದಿನದ ಪೂಜೆಯಲ್ಲಿ ಯಜ್ಞಕುಂಡದಲ್ಲೂ ನೈವೇದ್ಯ ಸಲ್ಲಿಸಲಾಯಿತು. ಇದೇ ವೇಳೆ, ನೂತನ ರಾಮ ಲಲ್ಲಾ ವಿಗ್ರಹದ ಸಂಪೂರ್ಣ ಚಿತ್ರಣ ಬಹಿರಂಗವಾಗಿದೆ. ಈ ಮೂರ್ತಿಯ 51 ಇಂಚು ಎತ್ತರ ಮತ್ತು ಅಂದಾಜು 1.5 ಟನ್ ತೂಕವಿದೆ. ಕಮಲದ ಮೇಲೆ ಐದು ವರ್ಷದ ಮಗು ನಿಂತಿರುವಂತೆ ಕಲ್ಲು ಶಿಲೆಯಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ. ವಿಗ್ರಹವು ಓಂ, ಚಕ್ರ, ಶಂಖ, ಗದಾ, ಸ್ವಸ್ತಿಕ್, ಗಣೇಶ, ಹನುಮಾನ್ ಮತ್ತು ಕಮಲಾ ನಯನ ಸೇರಿದಂತೆ ವಿವಿಧ ಧಾರ್ಮಿಕ ಸಂಕೇತಗಳನ್ನು ಹೊಂದಿದೆ. ಜನವರಿ 21ರವರೆಗೆ ವಿಧಿವಿಧಾನಗಳು ನಡೆಯಲಿವೆ.
ಜ.20ರಂದು ಸಂಜೆ ಪುಷ್ಪದಿವಸ್ ನಡೆಯಲಿದೆ. ಜ.21ರಂದು ಬೆಳಿಗ್ಗೆ ಶಯ್ಯಾದಿವಸ್ ಹಾಗೂ ಸಂಜೆ ಮಧ್ಯದಿವಸ್ ನೆರವೇರಲಿದೆ. ಇದರ ನಂತರ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ವಿಧಿವಿಧಾನಗಳು ನಡೆಯಲಿವೆ. ಭಾರತೀಯ ಆಧ್ಯಾತ್ಮಿಕತೆ, ಧರ್ಮ, ಪಂಥಗಳು ಸೇರಿದಂತೆ 150ಕ್ಕೂ ಹೆಚ್ಚು ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರ, ಮಂಡಲೇಶ್ವರ, ಶ್ರೀಮಹಾಂತ್, ಮಹಂತ್, ನಾಗಾ ಸೇರಿದಂತೆ 50ಕ್ಕೂ ಹೆಚ್ಚು ಬುಡಕಟ್ಟು, ಗಿರಿವಾಸಿ, ತತ್ವಸಿ, ಬುಡಕಟ್ಟು ಸಂಪ್ರದಾಯಗಳ ದ್ವೀಪವಾಸಿಗಳ ಎಲ್ಲಾ ಶಾಲೆಗಳ ಆಚಾರ್ಯರು ಹಾಗೂ ವಿವಿಧ ಸಂಸ್ಥೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.