ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರೆ, ಅಶ್ವಿನಿ ವೈಷ್ಣವ್ ಒಡಿಶಾದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೇಲ್ಮನೆಗೆ ಹೊಸದಾಗಿ ಚುನಾಯಿತರಾದ ಉಭಯ ಸದಸ್ಯರೊಂದಿಗೆ 14 ಹೊಸಬರು ಸಹ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಮೇಲ್ಮನೆಯ ಈ 14 ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಅದೇ ಸದನದ ಸದಸ್ಯರಾಗಿ ಕರ್ನಾಟಕದಿಂದ ಕಾಂಗ್ರೆಸ್ ನಾಯಕ ಅಜಯ್ ಮಾಕನ್, ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ನಾಯಕ ಆರ್‌ಪಿಎನ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಸದಸ್ಯ ಸಮಿಕ್ ಭಟ್ಟಾಚಾರ್ಯ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಇವರ ಜೊತೆಗೆ ವೈಎಸ್‌ಆರ್‌ಸಿಪಿ ನಾಯಕರಾದ ಗೋಲಾ ಬಾಬು ರಾವ್, ಮೇಧಾ ರಘುನಾಥ್ ರೆಡ್ಡಿ ಮತ್ತು ಯೆರುಂ ವೆಂಕಟ್ ಸುಬ್ಬಾ ರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜ್ಯಸಭಾ ಸದಸ್ಯರೆಲ್ಲರೂ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡರು.
ಸೋನಿಯಾ ಗಾಂಧಿ ಅವರು ಮೊದಲ ಬಾರಿಗೆ ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಅವರು ಸಭಾನಾಯಕ ಪಿಯೂಷ್ ಗೋಯಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು. ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಮತ್ತು ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಕೂಡ ಉಪಸ್ಥಿತರಿದ್ದರು.