ಚೆನ್ನೈ, ತಮಿಳುನಾಡು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದಿಂದಾಗ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಾದ ತಿರುವಳ್ಳುವರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ಅನೇಕ ತಗ್ಗು ರಸ್ತೆಗಳಲ್ಲಿ ನೀರು ನಿಂತಿದ್ದು, ಜನರು, ವಾಹನ ದಟ್ಟಣೆ ಸೇರಿದಂತೆ ಇತರ ಸಮಸ್ಯೆಗೆ ಒಳಗಾಗುವಂತೆ ಆಗಿದೆ.
ಸೋಮವಾರ ರಾತ್ರಿಯಿಂದ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆ ಸೇರಿದಂತೆ ಅನೇಕ ಕಡೆ ಅಧಿಕ ಮಳೆಯಾಗಿದೆ. ಮಳೆ ಮುನ್ಸೂಚನೆ ಕುರಿತು ಎಕ್ಸ್ನಲ್ಲಿ ಐಎಂಡಿ ಪೋಸ್ಟ್ ಮಾಡಿದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶ ಏರ್ಪಟ್ಟಿದ್ದು, ಈ ಮಾರುತಗಳು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ. ಇದರಿಂದ ಮುಂದಿನ ಎರಡು ದಿನ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ.
ಇಂದು - ನಾಳೆ ಚೆನ್ನೈ ಸುತ್ತಮುತ್ತ ಭಾರಿ ಮಳೆ:ಅಕ್ಟೋಬರ್ 15 ಮತ್ತು 16 ರಂದು ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದ್ದು, ಈ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ. ರಾಣಿಪೇಟ್, ತಿರುವಣ್ಣಾಮಲೈ, ವಿಲ್ಲುಪುರಂ, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಕಲ್ಲಕುರಿಚಿ ಮತ್ತು ಕಡಲೂರಿನಲ್ಲಿ ಆರೆಂಜ್ ಮತ್ತು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.