ಕರ್ನಾಟಕ

karnataka

ETV Bharat / bharat

'ಅಪಘಾತವಾಗಿದ್ದು ನಿಜ, ಆದರೆ..': ಪೋರ್ಷೆ ಕಾರು ಅಪಘಾತದ ಬಾಲಾಪರಾಧಿ ಬಿಡುಗಡೆಗೆ ಬಾಂಬೆ ಹೈಕೋರ್ಟ್​ ಆದೇಶ - Pune Porsche Car Crash - PUNE PORSCHE CAR CRASH

ಪೋರ್ಷೆ ಕಾರು ಅಪಘಾತದ ಆರೋಪಿಯನ್ನು ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್​ ಆದೇಶಿಸಿದೆ. ಬಾಲಾಪರಾಧಿಗೆ ಶಿಕ್ಷೆ ನೀಡುವಲ್ಲಿ ಬಾಲ ನ್ಯಾಯ ಮಂಡಳಿ ಎಡವಿದೆ ಎಂದು ಕೋರ್ಟ್​ ಹೇಳಿತು.

ಪೋರ್ಷೆ ಕಾರು ಅಪಘಾತದ ಬಾಲಾಪರಾಧಿ ಬಿಡುಗಡೆಗೆ ಬಾಂಬೆ ಹೈಕೋರ್ಟ್​ ಆದೇಶ
ಅಪಘಾತಕ್ಕೀಡಾದ ಐಷಾರಾಮಿ ಪೋರ್ಷೆ ಕಾರು (ETV Bharat)

By PTI

Published : Jun 25, 2024, 5:40 PM IST

ಮುಂಬೈ(ಮಹಾರಾಷ್ಟ್ರ):ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರ ಸಾವಿಗೆ ಕಾರಣವಾದ ಬಾಲಾಪರಾಧಿಯನ್ನು ಪೊಲೀಸರ ನಿಗಾದಲ್ಲಿರುವ ವೀಕ್ಷಣಾ ಗೃಹದಿಂದ ತಕ್ಷಣವೇ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್​ ಮಂಗಳವಾರ ಆದೇಶಿಸಿದೆ. ಇದೇ ವೇಳೆ, ಬಾಲ ನ್ಯಾಯ ಮಂಡಳಿ(ಜೆಜೆಬಿ) ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.

'ಬಾಲ ನ್ಯಾಯ ಮಂಡಳಿ ಆದೇಶವೇ ತಪ್ಪು': ಬಾಲಾಪರಾಧಿಯನ್ನು ಅಕ್ರಮವಾಗಿ ವೀಕ್ಷಣಾ ಗೃಹದಲ್ಲಿ ಇರಿಸಲಾಗಿದ್ದು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ, ಅಪ್ರಾಪ್ತ ಬಾಲಕನನ್ನು ವೀಕ್ಷಣಾ ಗೃಹದಲ್ಲಿರಿಸಲು ಆದೇಶಿಸಿದ ಬಾಲ ನ್ಯಾಯ ಮಂಡಳಿ ಆದೇಶವೇ ತಪ್ಪು. ಅಪ್ರಾಪ್ತನಿಗೆ ರಿಮಾಂಡ್ ಶಿಕ್ಷೆ ವಿಧಿಸಿದ್ದು, ಕಾನೂನುಬಾಹಿರ ಎಂದು ಹೇಳಿದೆ.

ಬಾಲ ನ್ಯಾಯ ಮಂಡಳಿಯು ಅಪಘಾತದ ತೀವ್ರತೆ ಮತ್ತು ಜನರ ಆಕ್ರೋಶವನ್ನು ಮಾತ್ರ ಪರಿಗಣಿಸಿದೆ. ಅಪಘಾತದಲ್ಲಿ ಭಾಗಿಯಾಗಿದ ಆರೋಪ ಹೊತ್ತಿರುವ ವ್ಯಕ್ತಿ ಅಪ್ರಾಪ್ತನಾಗಿದ್ದಾನೆ. ಆತನ ವಯಸ್ಸನ್ನೂ ನ್ಯಾಯಾಲಯ ಪರಿಗಣಿಸುವುದು ಮುಖ್ಯ. ಆತನನ್ನು ಎಲ್ಲ ಮಕ್ಕಳಂತೆಯೇ ಕಾಣಬೇಕು. ಪ್ರಕರಣದಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೋರ್ಟ್​ ಉಲ್ಲೇಖಿಸಿತು.

ನ್ಯಾಯಾಲಯಗಳು ಕಾನೂನಿನ ಕಟ್ಟಳೆಗಳಿಗೆ ಬದ್ಧವಾಗಿವೆ. ಬಾಲಾಪರಾಧಿ ಕಾಯಿದೆಯ ಧ್ಯೇಯೋದ್ದೇಶಗಳು ಅಪರಾಧದ ಗಂಭೀರತೆಯ ಹೊರತಾಗಿಯೂ ಆತನ ವಯಸ್ಸು ಮುಖ್ಯವಾಗುತ್ತದೆ. ಬಾಲಾಪರಾಧಿಗಳನ್ನು ವಿಭಿನ್ನವಾಗಿ ಪರಿಗಣಿಸಬೇಕು. ಆರೋಪಿಗೆ ಈಗಾಗಲೇ ಪುನರ್ವಸತಿ ಗೃಹಕ್ಕೆ ಕಳುಹಿಸಲಾಗಿದೆ. ಮನ:ಶಾಸ್ತ್ರಜ್ಞರ ಬಳಿಗೂ ಕರೆದೊಯ್ಯಲಾಗಿದೆ. ಆತನನ್ನು ತಕ್ಷಣಕ್ಕೆ ವೀಕ್ಷಣಾ ಗೃಹಬಂಧನದಿಂದ ಬಿಡುಗಡೆ ಮಾಡಿ ಎಂದು ಸೂಚಿಸಿದೆ.

ಏನಿದು ಪೋರ್ಷೆ ಕಾರು ದುರಂತ?:ಮೇ 19ರಂದು ಬೆಳಗ್ಗೆ 18 ವರ್ಷದೊಳಗಿನ ಆರೋಪಿ ಮತ್ತು ಆತನ ಸ್ನೇಹಿತರು ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದಾಗ ಇಬ್ಬರು ವ್ಯಕ್ತಿಗಳಿಗೆ ಪೋರ್ಷೆ ಕಾರಿನಿಂದ ರಭಸವಾಗಿ ಗುದ್ದಿದ್ದರು. ಇದರಿಂದ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತ ಆರೋಪಿಗೆ ಮೊದಲು ರಸ್ತೆ ಅಪಘಾತದ ಬಗ್ಗೆ ಪ್ರಬಂಧ ಬರೆಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು.

ಬಳಿಕ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿತ್ತು. ಜೆಜೆಬಿಯು ಆತನಿಗೆ ಪೊಲೀಸರ ನಿಗಾದಲ್ಲಿ ವೀಕ್ಷಣಾ ಗೃಹ ಬಂಧನಕ್ಕೆ ನೀಡಿತು. ಬಳಿಕ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಇದರ ವಿರುದ್ಧ ಆಕೆಯ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದು, ರಾಜಕೀಯ ಕಾರಣಕ್ಕಾಗಿ ಅಪ್ರಾಪ್ತನನ್ನು ಪೊಲೀಸ್​​ ಕಸ್ಟಡಿಯಲ್ಲಿ ಇಡಲಾಗಿದೆ ಎಂದು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಪೋರ್ಷೆ ಕಾರು ಅಪಘಾತ ಪ್ರಕರಣ: ಆರೋಪಿ ಬಾಲಕನ ತಾಯಿಯನ್ನು ಬಂಧಿಸಿದ ಪುಣೆ ಪೊಲೀಸರು - Porsche car accident case

ABOUT THE AUTHOR

...view details