ಕರ್ನಾಟಕ

karnataka

ETV Bharat / bharat

ರೈತರ ದಿಲ್ಲಿ ಚಲೋ: ಅಶ್ರುವಾಯು ಸಿಡಿಸಿದ ಪೊಲೀಸರು, ಹಲವರಿಗೆ ಗಾಯ; ಪ್ರತಿಭಟನೆ ತಾತ್ಕಾಲಿಕ ಸ್ಥಗಿತ - FARMERS PROTEST

ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿಲ್ಲಿ ಚಲೋ ನಡೆಸಲು ಉದ್ದೇಶಿಸಿದ್ದ ರೈತರು ಪ್ರತಿಭಟನೆಯನ್ನು ಮುಂದೂಡಿದ್ದಾರೆ.

Protesting farmers on 'Delhi Chalo' march stopped at Shambu border
ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದ ಪೊಲೀಸರು (PTI)

By ANI

Published : Dec 6, 2024, 6:45 PM IST

Updated : Dec 6, 2024, 6:57 PM IST

ಅಂಬಾಲಾ(ಹರಿಯಾಣ): ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ದೆಹಲಿ ಚಲೋಗೆ ಕರೆ ನೀಡಿರುವ ಪಂಜಾಬ್ ರೈತರು, ಭಾನುವಾರದವರೆಗೆ ಪ್ರತಿಭಟನೆ ಮುಂದೂಡಿದರು. ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಅನೇಕ ರೈತರು ಗಾಯಗೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ನಾಳೆ (ಶನಿವಾರ) ಮಾತುಕತೆ ನಡೆಸಲು ನಮ್ಮ ಒಪ್ಪಿಗೆ ಇದೆ. ರೈತರೊಂದಿಗೆ ಯಾರೇ ಮಾತುಕತೆ ನಡೆಸಿದರೂ ಸರಿ. ನಾವು ಸರ್ಕಾರದ ಜೊತೆ ಸಂಘರ್ಷವನ್ನು ಯಾವತ್ತೂ ಬಯಸುವುದಿಲ್ಲ. ನಾವು ಶಾಂತಿಯುತವಾಗಿ ಆಲಿಸುತ್ತೇವೆ. ಶನಿವಾರದವರೆಗೆ ಕಾಯುತ್ತೇವೆ. ಮಾತುಕತೆಯಿಂದ ಬಗೆಹರಿಯರಿಯಬೇಕು ಎಂಬುವುದು ನಮ್ಮ ಬಯಕೆ ಎಂದು ರೈತ ಮುಖಂಡ ಶರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 101 ಮಂದಿ ಇರುವ ರೈತರ ಪ್ರತಿಭಟನಾ ಜಾಥ, ಶಂಭು ಗಡಿಯಿಂದ ದೆಹಲಿಯತ್ತ ಪಾದಯಾತ್ರೆ ನಡೆಸಿದೆ. ಆದರೆ, ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಸ್ಥಳದಿಂದ ಕೆಲವೇ ಮೀಟರ್​ಗಳಲ್ಲಿ ರೈತರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದಿದ್ದಾರೆ. ಪ್ರತಿರೋಧ ನೀಡಿದ್ದರಿಂದ ಭದ್ರತಾ ಸಿಬ್ಬಂದಿ ಪ್ರತಿಭಟನಾನಿರತರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದಾರೆ. ಅಲ್ಲದೇ ಪೊಲೀಸರು ನಿರ್ಮಿಸಿದ್ದ ಕಾಂಕ್ರೀಟ್ ಬ್ಲಾಕ್​, ಕಬ್ಬಿಣದ ಮೊಳೆ ಹಾಗೂ ಮುಳ್ಳು ತಂತಿಗಳನ್ನು ಭೇದಿಸುವಲ್ಲಿ ವಿಫಲಗೊಂಡಿದ್ದರಿಂದ ತಮ್ಮ ಮೆರವಣಿಗೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಇಂದಿನ ಪ್ರತಿಭಟನೆಯಿಂದ ಗ್ರೇಟರ್ ನೋಯ್ಡಾದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಪೊಲೀಸರು ಕೆಲವು ರೈತರನ್ನು ವಶಕ್ಕೆ ಪಡೆದರು. ಶಾಂತಿಯುತವಾಗಿ ಹೋರಾಟ ಮಾಡುವಂತೆ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡದಂತೆ, ದೆಹಲಿ ಚಲೋಗೆ ಅನುಮತಿ ಪಡೆಯುವಂತೆ ಪೊಲೀಸರು ಮೈಕ್​ ಮೂಲಕ ರೈತರಲ್ಲಿ ಮನವಿ ಮಾಡಿಕೊಂಡರು. ಆದರೆ, ದೆಹಲಿಗೆ ಹೋಗಲು ಯಾವುದೇ ರೀತಿಯ ಅನುಮತಿ ಅಗತ್ಯವಿಲ್ಲ ಎಂದು ರೈತರು ಪೊಲೀಸರ ವಿರುದ್ಧ ಘೋಷಣೆ ಕೂಗತೊಡಗಿದರು.

"ನಮಗೆ ಶಾಂತಿಯುತವಾಗಿ ದೆಹಲಿಗೆ ಹೋಗಲು ಅವಕಾಶ ನೀಡಬೇಕು ಅಥವಾ ನಮ್ಮ ಬೇಡಿಕೆಗಳ ಬಗ್ಗೆ ಮಾತನಾಡಬೇಕು. ರೈತರ ಕಡೆಯಿಂದ ಮಾತುಕತೆಯ ಬಾಗಿಲು ತೆರೆದಿದೆ. ಸರ್ಕಾರ ಮಾತನಾಡಲು ಬಯಸಿದರೆ ನಮಗೆ ತಿಳಿಸುವಂತೆ ನಾವು ಹೇಳುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. ಹರಿಯಾಣ ಅಥವಾ ಪಂಜಾಬ್ ಸಿಎಂ ಕಚೇರಿಗೆ ಪತ್ರ ಬರೆಯಬೇಕು. ದೆಹಲಿಯಲ್ಲಿ ಪ್ರತಿಭಟನೆಗೆ ಜಾಗ ನೀಡಬೇಕು. ಅಂಬಾಲಾದಲ್ಲಿ ಇಂಟರ್‌ನೆಟ್ ಸೇವೆ ಮರುಸ್ಥಾಪಿಸಬೇಕು" ಎಂದು ರೈತರ ಮುಖಂಡ ಶರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

Last Updated : Dec 6, 2024, 6:57 PM IST

ABOUT THE AUTHOR

...view details