ನವದೆಹಲಿ: ಲೋಕಸಭೆಯಲ್ಲಿ ವಯನಾಡು ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ತಮ್ಮ ಕ್ಷೇತ್ರ ವಯನಾಡುಗೆ ಆಗಮಿಸುತ್ತಿದ್ದಾರೆ. ಮೊದಲ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಮೂಲಕ ಸಂಸತ್ ಪ್ರವೇಶಿಸಿರುವ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆ ಕೂಡ ನಡೆಸಲಾಗಿದೆ.
ವಯನಾಡುಗೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿಗೆ ಸಹೋದರ ರಾಹುಲ್ ಗಾಂಧಿ ಕೂಡ ಜೊತೆಯಾಗಲಿದ್ದು, ಸಾರ್ವಜನಿಕ ಸಭೆಯಲ್ಲಿ ಇಬ್ಬರು ಭಾಗಿಯಾಗಲಿದ್ದಾರೆ.
ಶನಿವಾರ ಕೋಝಿಕ್ಕೊಡ್ ಜಿಲ್ಲೆಯ ತಿರುವಬಡಿ ವಿಧಾನಸಭಾ ಕ್ಷೇತ್ರದ ಮುಕ್ಕಮ್ನಲ್ಲಿ ಸಭೆ ನಡೆಸಲಿದ್ದಾರೆ. ಬಳಿಕ ಅವರು ಎರನಾಡಿನ ನಿಲಂಬೂರಿನ ಕರುಳೈ ಮತ್ತು ಎರನಾಡಿನ ಎಡವನ್ನಾದಲ್ಲಿ ಮಧ್ಯಾಹ್ನ 2.15ರಿಂದ 4.30ರ ವರೆಗೆ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ನ. 23ರಂದು ಪ್ರಕಟವಾದ ಫಲಿತಾಂಶದಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದ ಅವರಿಗೆ ಬುಧವಾರ ಪಕ್ಷದ ನಾಯಕರು ಗೆಲುವಿನ ಪ್ರಮಾಣ ಪತ್ರವನ್ನು ನೀಡಿದ್ದರು. ಮರುದಿನ ಗುರುವಾರ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ ಹರ್ಷೋದ್ಘಾರದ ನಡುವೆ ಸಂವಿಧಾನದ ಪ್ರತಿ ಹಿಡಿದು ಸಂಸದೆಯಾಗಿ ಪ್ರಿಯಾಂಕಾ ಪ್ರಮಾಣವಚನ ಸ್ವೀಕರಿಸಿದ್ದರು.