ನವದೆಹಲಿ:ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅ.23 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ, ಅಂದು ಬೃಹತ್ ರೋಡ್ ಶೋ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.
ವಯನಾಡ್‌ನ ಮತದಾರರು ಗಾಂಧಿ ಕುಟುಂಬದೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧ ಮತ್ತು 2026ರ ಕೇರಳ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಿಯಾಂಕಾರನ್ನು ಈ ಕ್ಷೇತ್ರದಿಂದ ಕಣಕ್ಕಿಸಲಾಗುತ್ತಿದೆ. ಉಪಚುನಾವಣೆಗೆ ಪಕ್ಷ ಹೆಚ್ಚು ಆದ್ಯತೆ ನೀಡಿದ್ದು, ಆಲಪ್ಪುಳ ಕ್ಷೇತ್ರದ ಸಂಸದ ಹಾಗೂ ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಉಪಚುನಾವಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ವೇಣುಗೋಪಾಲ್ ಮತ್ತು ಕೇರಳದ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಷಿ ನೇತೃತ್ವದಲ್ಲಿ ಸೆಪ್ಟೆಂಬರ್ 25ರಂದು ವಯನಾಡ್‌ನ ಸ್ಥಳೀಯ ನಾಯಕರ ಜೊತೆ ಸಮಾವೇಶ ನಡೆಸುವ ಮೂಲಕ ಲೋಕಸಭಾ ಉಪಚುನಾವಣೆಗೆ ಸಿದ್ಧತೆ ಪ್ರಾರಂಭಿಸಿದ್ದರು. ವೇಣುಗೋಪಾಲ್ ಅ.17ರಂದು ಕೋಝಿಕ್ಕೋಡ್‌ನ ಮುಕ್ಕಂನಲ್ಲಿ ಯುಡಿಎಫ್ ನಾಯಕರೊಂದಿಗೆ ಸಭೆ ನಡೆಸಿ ಪ್ರಿಯಾಂಕಾಗೆ ಭಾರಿ ಗೆಲುವಿನ ಅಂತರ ತಂದುಕೊಡುವಂತೆ ಮನವಿ ಮಾಡಿದ್ದಾರೆ.
"ವಯನಾಡ್ ಕಾಂಗ್ರೆಸ್‌ನೊಂದಿಗೆ ಆಳವಾದ ಸಂಪರ್ಕ ಹೊಂದಿರುವ ವಿಶೇಷ ಸ್ಥಳ. ಸಂಸತ್ತಿನಲ್ಲಿ ತಮ್ಮ ಧ್ವನಿಯಾಗಿ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡಲು ಜನತೆ ಉತ್ಸುಕರಾಗಿದ್ದಾರೆ. ಪ್ರಿಯಾಂಕಾ ಲೋಕಸಭೆಯಲ್ಲಿ ನಮ್ಮ ಧ್ವನಿಯಾಗಲು ಸಿದ್ಧರಾಗಿದ್ದಾರೆ, ನಮ್ಮ ಹಕ್ಕುಗಳಿಗಾಗಿ ಹೋರಾಡಲು ಮತ್ತು ನಮ್ಮ ಕಾಳಜಿಗಳನ್ನು ಪರಿಹರಿಸಲು ತಯಾರಾಗಿದ್ದಾರೆ" ಎಂದು ಕೇರಳದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.