ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಬಹುಮತ ಪಡೆಯಲಿದೆ. ಪಕ್ಷದ ಹಿಡಿತವಿಲ್ಲದ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ತನ್ನ ಸ್ಥಾನ ಮತ್ತು ಮತಗಳ ಪಾಲನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕಸಮರದ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ಇದ್ದ ಅವಕಾಶಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಹೀಗಾಗಿ ಅದು ಚುನಾವಣೆಯಲ್ಲಿ ಸಮರ್ಥ ಎದುರಾಳಿಯಾಗಿ ಉಳಿದಿಲ್ಲ. ತಪ್ಪಾದ ತಂತ್ರಗಳೇ ಅದಕ್ಕೆ ತಿರುಗುಬಾಣವಾಗಿವೆ ಎಂದು ಹೇಳಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಬಿಜೆಪಿ ಮೊದಲ ಅಥವಾ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಶ್ಚಿಮಬಂಗಾಳ, ಒಡಿಶಾದಲ್ಲಿ ನಂಬರ್ 1 ಪಕ್ಷವಾಗಿ ಸಾಧನೆ ಮಾಡಲಿದೆ. ತಮಿಳುನಾಡಿನಲ್ಲಿ ಅದರ ಮತ ಗಳಿಕೆಯನ್ನು ಎರಡಂಕಿಗೆ ಹೆಚ್ಚಿಸಿಕೊಳ್ಳಲಿದೆ. ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳದಲ್ಲಿ 204 ಸ್ಥಾನಗಳನ್ನು ಅದು ಗಳಿಸಲಿದೆ. 2014 ಹಾಗೂ 2019ರಲ್ಲಿ ಈ ಎಲ್ಲ ರಾಜ್ಯಗಳಲ್ಲಿ 50 ಸ್ಥಾನಗಳನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಗುರಿಯಾದ 370 ಸ್ಥಾನ ಗೆಲ್ಲಲ್ಲ:ಬಿಜೆಪಿ ಈ ಬಾರಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಇದು ಸಾಧ್ಯವಾಗಲ್ಲ ಎಂಬುದು ಚುನಾವಣಾ ಚಾಣಕ್ಯನ ಹೇಳಿಕೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತನ್ನ ಗುರಿಯನ್ನು ತಲುಪಲು ಸಾಧ್ಯತೆ ಕಮ್ಮಿ. ಕಾಂಗ್ರೆಸ್, ತನ್ನ ಪ್ರಾಬಲ್ಯವಿರುವ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಕನಿಷ್ಠ 100 ಸ್ಥಾನಗಳನ್ನು ಖೋತಾ ಮಾಡಬೇಕು. ಆಗ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ. ಆದರೆ, ಕಾಂಗ್ರೆಸ್ನ ಪ್ರಸ್ತುತ ತಂತ್ರಗಳು ಬಿಜೆಪಿ ವಿರುದ್ಧವಾಗಿಲ್ಲ ಎಂದಿದ್ದಾರೆ.