ರಾಂಪುರ, ಉತ್ತರಪ್ರದೇಶ:ಉತ್ತರಪ್ರದೇಶದ ರಾಮ್ಪುರಜಿಲ್ಲೆಯಲ್ಲಿ ಕಳ್ಳನೊಬ್ಬ ಯುಪಿ ಪೊಲೀಸ್ ವಾಹನವನ್ನು ಕದ್ದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ವಾಹನ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದ ಪೊಲೀಸರು ಹಿಂತಿರುಗಿದಾಗ ವಾಹನ ನಾಪತ್ತೆಯಾಗಿತ್ತು. ಇದು ಒಂದು ಕ್ಷಣ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಕೂಡಲೇ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಗಸ್ತು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತೀವ್ರ ಹುಡುಕಾಟ ನಡಸಿ ನಂತರ ವಾಹನವನ್ನು ಪತ್ತೆಹಚ್ಚಿದ್ದಾರೆ.
ಈ ಘಟನೆ ಜೂನ್ 16 ರಂದು ನಡೆದಿದೆ ಎನ್ನಲಾಗಿದೆ. ವಾಸ್ತವವಾಗಿ ಘಟನೆ ದಿನ ರಾತ್ರಿ ಯುಪಿ 112 ಪೊಲೀಸ್ ತಂಡವು ರಾಂಪುರ ಪೊಲೀಸ್ ಠಾಣೆಯ ಕ್ಯಾಮ್ರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಈದ್ಗಾ ಎಂಬ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಚಹಾ ಸೇವಿಸಲು ತೆರಳಿದ್ದಾರೆ. ಚಹಾ ಕುಡಿದ ಬಳಿಕ ಹಿಂತಿರುಗಿದಾಗ 112 ವಾಹನ ಕಾಣೆಯಾಗಿದೆ. ಇದನ್ನು ಕಂಡು ಗಾಬರಿಗೊಂಡ ಪೊಲೀಸರು ಆ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ವಾಹನ ಸಿಗದೇ ಇದ್ದ ವೇಳೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸುಮಾರು 2 ರಿಂದ 3 ಗಂಟೆಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಅಂತಿಮವಾಗಿ ಸಮೀಪದ ಕೆಮ್ರಿ ಸ್ವರ್ ಖುರ್ದ್ ಎಂಬ ಪ್ರದೇಶದಲ್ಲಿ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪನ್ನೇ ಕದ್ದ ಭೂಪ: ಕಾರಣ ಕೇಳಿದರೆ ಅಚ್ಚರಿ!