ವಯನಾಡ್: ಭೀಕರ ಭೂ ಕುಸಿತಕ್ಕೆ ಒಳಗಾದ ವಯನಾಡಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಹಾನಿಗೊಳಗಾದ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಹಾನಿಗೊಳಗಾದ ವೆಲ್ಲಾರ್ಮಾಲಾದ ಜಿವಿಹೆಚ್ಎಸ್ ಶಾಲೆಗೆ ಭೇಟಿ ನೀಡಿದ ಅವರು, ಘಟನೆಯಲ್ಲಿ ಎಷ್ಟು ಮಕ್ಕಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ ಎಂದು ಗದ್ಗದಿತವಾಗಿ ಕೇಳಿದರು.
ದುರಂತದಲ್ಲಿ ಹೆಚ್ಚು ಹಾನಿಗೊಂಡಿರುವ ಚೂರಾಲ್ಮಾಲ, ಮುಂಡಕೈ ಪ್ರದೇಶಕ್ಕೆ ಭಾರತೀಯ ಸೇನಾ ಹೆಲಿಕಾಪ್ಟರ್ನಿಂದ ಬಂದಿಳಿದ ಅವರು, ಅಲ್ಲಿನ ಪುನರ್ವಸತಿ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು. ಇದಕ್ಕೆ ಮುನ್ನ ಕಣ್ಣೂರು ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಬಂದಿಳಿದ ಅವರನ್ನು ಕೇರಳ ರಾಜ್ಯಪಾಲರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಗತಿಸಿದರು.
ಇದೇ ವೇಳೆ ಭೂ ಕುಸಿತದಿಂದ ಹಾನಿಗೊಳಗಾದ ಕಲಪೆಟ್ಟ ಶಾಲೆಗೆ ಮೊದಲು ಭೇಟಿ ನೀಡಿದರು. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿನಾಥ್, ಆಂತರಿಕ ಸಚಿವರ ಕೇಂದ್ರ ತಂಡ ಅವರ ಜೊತೆಗಿದ್ದರು.
ಹಾನಿಗೊಳಗಾದ ಶಾಲೆ ನೋಡಿ ತೀವ್ರ ಬೇಸರ ಹೊಂದಿದ ಅವರು, ಭೂಕುಸಿತ ಸಂತ್ರಸ್ತರ ಪುನರ್ವಸತಿ ಕಾರ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. ಶಾಲೆಯಲ್ಲಿ 15 ನಿಮಿಷ ಕಳೆದ ಅವರು, ಹೊಸ ಶಾಲಾ ಕಟ್ಟಡ ನಿರ್ಮಾಣದ ಯೋಜನೆ ಕುರಿತು ವಿಚಾರಿಸಿದರು.
ಹಾನಿಗೊಳಗಾದ ಜಿವಿಹೆಚ್ ಶಾಲೆ ವೆಲ್ಲಾರ್ಮಾಲಾದಲ್ಲಿ 582 ವಿದ್ಯಾರ್ಥಿಗಳಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ ಎಂಬ ವರದಿಯಾಗಿದೆ.