ಕುಂತಿ(ಜಾರ್ಖಂಡ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಪ್ರಧಾನಿ ಮೋದಿ ನಾಲ್ಕೂವರೆ ಗಂಟೆಗಳ ಕಾಲ ನಿಲ್ಲಿಸಿದ್ದರು. ಈ ಮೂಲಕ ಉಕ್ರೇನ್‌ನಲ್ಲಿ ಸಿಲುಕಿದ್ದ 20,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತವರಿಗೆ ಮರಳಲು ಅನುಕೂಲವಾಗುವಂತೆ ಯುದ್ಧ ತಡೆದಿದ್ದರು. ಇದನ್ನು ವಿಶ್ವದ ಯಾವುದೇ ನಾಯಕರಿಗೂ ಮಾಡಲು ಸಾಧ್ಯವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಕುಂತಿಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅರ್ಜುನ್ ಮುಂಡಾ ಪರ ಚುನಾವಣಾ ಭಾಷಣ ಉದ್ದೇಶಿಸಿ ಮಾತನಾಡಿದ ಅವರು, ''ರಷ್ಯಾ ಮತ್ತು ಉಕ್ರೇನ್ ನಡುವೆ ಎರಡು ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಇಬ್ಬರೂ ರಾಷ್ಟ್ರಗಳು ಪರಸ್ಪರ ಬಾಂಬ್ ಹಾಕುವುದು ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಾರೆ. ಯುದ್ಧ ಪ್ರಾರಂಭವಾದಾಗ ಸಾವಿರಾರು ಭಾರತೀಯ ಮಕ್ಕಳು ಅಲ್ಲಿ ಸಿಲುಕಿದ್ದರು. ಭಾರತದಲ್ಲಿರುವ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದರು. ಪ್ರಧಾನಿ ಮೋದಿ ಅವರ ಭೇಟಿಯಾಗಿ ತಮ್ಮ ಮಕ್ಕಳನ್ನು ಭಾರತಕ್ಕೆ ಮರಳಿ ಕರೆತರುವಂತೆ ಪೋಷಕರು ಕೇಳಿಕೊಂಡಿದ್ದರು'' ಎಂದು ಹೇಳಿದರು.
ಮುಂದುವರೆದು, ''ಬಾಂಬ್ ಸ್ಫೋಟಗಳ ನಡುವೆ ಭಾರತಕ್ಕೆ ವಿದ್ಯಾರ್ಥಿಗಳು ಮರಳಲು ಹೇಗೆ ಸಾಧ್ಯವಾಯಿತು ಎಂದರೆ, ಪ್ರಧಾನಿ ಮೋದಿ ಫೋನ್ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಕರೆ ಮಾಡಿ ಮಾತನಾಡಿದರು. ಆಗ ನಾಲ್ಕೂವರೆ ಗಂಟೆಗಳ ಕಾಲ ಯುದ್ಧ ನಿಲ್ಲಿಸಲಾಯಿತು. ನಮ್ಮ 22,500 ಮಕ್ಕಳು ಭಾರತಕ್ಕೆ ಮರಳಿದರು'' ಎಂದು ರಕ್ಷಣಾ ಸಚಿವರು ವಿವರಿಸಿದರು.