ನವದೆಹಲಿ: ದೇಶಾದ್ಯಂತ 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇಂದು ಬೆಳಿಗ್ಗೆ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಇದು 7ನೇ 'ಪರೀಕ್ಷೆ ಪೇ ಚರ್ಚಾ' ಕಾರ್ಯಕ್ರಮವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, 'ನಾನು ಪರೀಕ್ಷಾ ಪೇ ಚರ್ಚೆಗಾಗಿ ತುಂಬಾ ಉತ್ಸುಕನಾಗಿದ್ದೇನೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಯ ಒತ್ತಡ ನಿವಾರಿಸುವ ಮಾರ್ಗಗಳ ಕುರಿತು ನಡೆಯುವ ಸಂವಾದವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಪರೀಕ್ಷೆಯ ನಿರಾಸೆಗಳನ್ನು ಅವಕಾಶಗಳ ಕಿಟಿಕಿಗಳಾಗಿ ಪರಿವರ್ತಿಸೋಣ' ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಲಿಂಕ್ ಹಂಚಿಕೊಂಡಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ವಿವಿಧ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಲಿಂಕ್ ಕ್ಲಿಕ್ ಮಾಡಿದರೆ https://www.narendramodi.in/parikshapecharcha ವೆಬ್‌ಸೈಟ್ ತೆರೆಯುತ್ತದೆ. ವೆಬ್ಸೈಟ್ನ ಮುಖಪುಟದಲ್ಲಿ ವಿಡಿಯೋ, ಫೋಟೋ ಮತ್ತು ಪಠ್ಯದ ಮೂಲಕ ಸಲಹೆಗಳನ್ನು ನೀಡಲಾಗಿದೆ.