ವಾರಾಣಸಿ (ಉತ್ತರ ಪ್ರದೇಶ):ಗುಜರಾತ್‌ನಲ್ಲಿ ಕೆಲ ಕಾರ್ಯಗಳಿಗೆ ಚಾಲನೆ ನೀಡಿದ ನಂತರ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ಶಿವಪುರ - ಫುಲ್ವಾರಿಯಾ - ಲಹರ್ತರಾ ಮಾರ್ಗವನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ವಾರಾಣಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು.
ಬರೋಬ್ಬರಿ 360 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವಿಮಾನ ನಿಲ್ದಾಣದ ಕಡೆಗಿನ ಪ್ರಯಾಣದ ದೂರವನ್ನು 75 ನಿಮಿಷಗಳಿಂದ 45 ನಿಮಿಷಗಳಿಗೆ ಕಡಿಮೆ ಮಾಡಲು ಈ ಮಾರ್ಗ ಸಹಾಯ ಮಾಡುತ್ತದೆ.
ವಾರಾಣಸಿಯಲ್ಲಿ ಪೂರ್ವಾಂಚಲ್ ಉಡುಗೊರೆ ಭಾಗವಾಗಿ 1,3167.07 ಕೋಟಿ ರೂಪಾಯಿಯ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಇಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ವತಂತ್ರ್ಯ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಬಳಿಕ ಸಂತ ಶಿರೋಮಣಿ ರವಿದಾಸ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಭಕ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದಾದ ನಂತರ, ಕಾರ್ಖಿಯಾನ್ವ್ ಆಗ್ರೋ ಪಾರ್ಕ್‌ನಲ್ಲಿರುವ ಬನಾಸ್ ಕಾಶಿ ಸಂಕುಲ್ (ಅಮುಲ್ ಡೈರಿ)ಗೆ ಭೇಟಿ ನೀಡಲಿದ್ದಾರೆ. ಪಾರ್ಕ್ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1,0972.00 ಕೋಟಿ ರೂ. ಮೌಲ್ಯದ 23 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ 2,195.07 ಕೋಟಿ ರೂ. ಮೌಲ್ಯದ 12 ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸುವ ನಿರೀಕ್ಷೆ ಇದೆ.