ಕರ್ನಾಟಕ

karnataka

ETV Bharat / bharat

ಮೋದಿ ಕುವೈತ್ ಪ್ರವಾಸ ಶೀಘ್ರ: 43 ವರ್ಷಗಳಲ್ಲಿ ಭಾರತದ ಪ್ರಧಾನಿಯ ಮೊದಲ ಭೇಟಿ - INDIAN PM VISIT KUWAIT

ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಕುವೈತ್‌ಗೆ ಭೇಟಿ ನೀಡಲಿದ್ದಾರೆ.

ಯುವರಾಜ ಶೇಖ್ ಸಬಾಹ್ ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್, ಪ್ರಧಾನಿ ನರೇಂದ್ರ ಮೋದಿ
ಕುವೈತ್ ಯುವರಾಜ ಶೇಖ್ ಸಬಾಹ್ ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಮತ್ತು ಪ್ರಧಾನಿ ನರೇಂದ್ರ ಮೋದಿ (IANS (ಸಂಗ್ರಹ ಚಿತ್ರ))

By ETV Bharat Karnataka Team

Published : Dec 10, 2024, 5:30 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲಿಯೇ ಪಶ್ಚಿಮ ಏಷ್ಯಾದ ಪ್ರಮುಖ ದೇಶವಾದ ಕುವೈತ್‌ಗೆ ಭೇಟಿ ನೀಡಲಿದ್ದಾರೆ. ಇದು ಕಳೆದ 43 ವರ್ಷಗಳಲ್ಲಿ ಕುವೈತ್​ಗೆ ಭಾರತದ ಪ್ರಧಾನಿಯೊಬ್ಬರ ಪ್ರಥಮ ಭೇಟಿಯಾಗಿದೆ. ಕುವೈತ್ ಪ್ರಸ್ತುತ ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಅಧ್ಯಕ್ಷತೆ ಹೊಂದಿರುವುದು ಗಮನಾರ್ಹ.

ಕಳೆದ ವಾರ ನವದೆಹಲಿಗೆ ಆಗಮಿಸಿದ್ದ ಕುವೈತ್ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಅವರು ಲೋಕ ಕಲ್ಯಾಣ ಮಾರ್ಗ್‌ನಲ್ಲಿನ ಪ್ರಧಾನಿಯವರ ನಿವಾಸಕ್ಕೆ ಭೇಟಿ ನೀಡಿ, ಆದಷ್ಟು ಶೀಘ್ರ ತಮ್ಮ ದೇಶಕ್ಕೆ ಆಗಮಿಸುವಂತೆ ಪ್ರಧಾನಿಗೆ ಔಪಚಾರಿಕ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಮೋದಿ ಒಪ್ಪಿಕೊಂಡಿದ್ದಾರೆ.

ಇದಾಗಿ ಕೆಲ ಗಂಟೆಗಳ ನಂತರ ಹೈದರಾಬಾದ್ ಹೌಸ್​ನಲ್ಲಿ ವಿದೇಶಾಂಗ ಸಚಿವ (ಇಎಎಂ) ಎಸ್.ಜೈಶಂಕರ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಭಾರತವನ್ನು ಕುವೈತ್​ನ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವೆಂದು ಬಣ್ಣಿಸಿ, ಪ್ರಧಾನಿ ಮೋದಿ ವಿಶ್ವದ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

"ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಮತ್ತು ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ವಿಶ್ವಾದ್ಯಂತದ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ನಾವು ನಂಬುತ್ತೇವೆ. ಪ್ರಧಾನಿಯವರು ಭಾರತವನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತಾರೆ ಎಂಬುದು ನನಗೆ ಖಾತ್ರಿಯಿದೆ. ಭಾರತವು ನಮಗೆ ಬಹಳ ಮುಖ್ಯವಾದ ಪಾಲುದಾರ ರಾಷ್ಟ್ರವಾಗಿದೆ ಮತ್ತು ನಾವು ನಮ್ಮ ಸಂಬಂಧಗಳನ್ನು ಗೌರವಿಸುತ್ತೇವೆ" ಎಂದು ಕುವೈತ್ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಡಿಸೆಂಬರ್ 4ರಂದು ನಡೆದ ಸಭೆಯಲ್ಲಿ ಹೇಳಿದರು.

2014ರಲ್ಲಿ ಪ್ರಧಾನಿಯಾದ ನಂತರ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಸೌದಿ ಅರೇಬಿಯಾ, ಒಮಾನ್ ಮತ್ತು ಕತಾರ್ ಒಳಗೊಂಡಿರುವ ಜಿಸಿಸಿ ಸದಸ್ಯ ರಾಷ್ಟ್ರಗಳ ಪೈಕಿ ಮೋದಿ ಈವರೆಗೂ ಭೇಟಿ ನೀಡದ ಏಕೈಕ ರಾಷ್ಟ್ರ ಕುವೈತ್ ಆಗಿದೆ. 2022ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಪ್ರಧಾನಿ ಮೋದಿಯವರ ಉದ್ದೇಶಿತ ಕುವೈತ್ ಭೇಟಿಯನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್​ನಲ್ಲಿ ನ್ಯೂಯಾರ್ಕ್​ನಲ್ಲಿ ನಡೆದ ಯುಎನ್​ಜಿಎ ಯ 79 ನೇ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕುವೈತ್ ದೇಶದ ಯುವರಾಜ ಶೇಖ್ ಸಬಾಹ್ ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ: ಸಿರಿಯಾ ಆಕ್ರಮಿಸಿದ ತಹ್ರಿರ್ ಅಲ್-ಶಾಮ್ ನಾಯಕ ಜುಲಾನಿ ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ

ABOUT THE AUTHOR

...view details