ನವದೆಹಲಿ: ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹಾಗೂ ಖ್ಯಾತ ಯೋಗ ಗುರು ಬಾಬಾ ರಾಮ್‌ದೇವ್ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ಗೆ 'ಬೇಷರತ್ ಕ್ಷಮೆ' ಕೇಳಿದ್ದಾರೆ. ಇಂದು ಸುಪ್ರೀಂ ಕೋರ್ಟ್‌ಗೆ ಹೊಸ ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂಕೋರ್ಟ್‌ಗೆ ನೀಡಲಾದ ಭರವಸೆ ಉಲ್ಲಂಘಿಸಿ ತಪ್ಪುದಾರಿ ಗೆಳೆಯುವ ವೈದ್ಯಕೀಯ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ "ಬೇಷರತ್ ಕ್ಷಮೆಯಾಚನೆ" ವ್ಯಕ್ತಪಡಿಸಿದ್ದಾರೆ. ನಾಳೆ (ಮಾ.10) ವಿಚಾರಣೆಗೆ ನಡೆಯಲಿದ್ದು, ಅದಕ್ಕೂ ಮುನ್ನ ಅವರು ಕ್ಷಮೆ ಕೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರು ಸಲ್ಲಿಕೆ ಮಾಡಿದ್ದ ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್ಗೆ ಬಗ್ಗೆ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿತ್ತು. ಅಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಇಬ್ಬರಿಗೂ ಛೀಮಾರಿ ಹಾಕಿ ಸೂಕ್ತ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಮತ್ತೊಂದು ಕೊನೆಯ ಅವಕಾಶ ನೀಡಿ ವಿಚಾರಣೆಯನ್ನು ಸಹ ಮುಂದೂಡಿತ್ತು. ಅಲ್ಲದೇ ಈ ಹಿಂದಿನ ವಿಚಾರಣೆಯಲ್ಲಿ ಕೋರ್ಟ್ ನೀಡಿದ ನಿರ್ದೇಶಗಳನ್ನು ಪಾಲಿಸದೇ ನಿಯಮ ಮೀರಿದ್ದಲ್ಲದೇ, ತಪ್ಪಾದ ಅಫಿಡವಿಟ್ ಸಲ್ಲಿಸಲಾಗಿದೆ. ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕೇಸ್ ದಾಖಲಿಸಬಾರದೇಕೆ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಪ್ರಶ್ನಿಸಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಭರವಸೆ ಪಾಲಿಸದಿದ್ದಕ್ಕಾಗಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನಿಲಾ ಅವರ ಪೀಠದ ಮುಂದೆ ಹಾಜರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಇಬ್ಬರೂ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಲೋಪಕ್ಕೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಮತ್ತು ಅದೇ ರೀತಿ ಭವಿಷ್ಯದಲ್ಲಿ ಈ ರೀತಿಯಾಗಿ ಪುನರಾವರ್ತನೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲು ಬಯಸುತ್ತೇವೆ ಮತ್ತು ಕಾನೂನು ಮತ್ತು ನ್ಯಾಯದ ಘನತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಅವರು ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅಫಿಡವಿಟ್‌ನಲ್ಲಿ ಏನಿದೆ?: ನವೆಂಬರ್ 21, 2023ರ ಈ ನ್ಯಾಯಾಲಯದ ಆದೇಶದ ಪ್ಯಾರಾ 3ರಲ್ಲಿ ದಾಖಲಿಸಲಾದ ಹೇಳಿಕೆಯ ಉಲ್ಲಂಘನೆಗಾಗಿ ನಾನು ಈ ಮೂಲಕ ಬೇಷರತ್ ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಅಂತಹ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡಲಾಗುವುದಿಲ್ಲ. ನವೆಂಬರ್ 22, 2023 ರಂದು ನಡೆದ ಪತ್ರಿಕಾಗೋಷ್ಠಿಗಾಗಿ ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಈ ಲೋಪಕ್ಕೆ ನಾನು ವಿಷಾದಿಸುತ್ತೇನೆ ಮತ್ತು ಭವಿಷ್ಯದಲ್ಲಿ ಇಂತಹುದ್ದು ಮತ್ತೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡುತ್ತೇನೆ. ಈ ಹೇಳಿಕೆಯ ಮೇಲಿನ ಉಲ್ಲಂಘನೆಗಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಯಾವಾಗಲೂ ಕಾನೂನಿನ ಘನತೆ ಮತ್ತು ನ್ಯಾಯದ ಮಹಿಮೆಯನ್ನು ಎತ್ತಿಹಿಡಿಯುತ್ತೇನೆ ಎಂದು ಇಬ್ಬರೂ ತಮ್ಮ ಅಫಿಡವಿಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಬುಧವಾರ ವಿಚಾರಣೆ ನಡೆಯಲಿದ್ದು, ಅದಕ್ಕೂ ಮುನ್ನ ಕ್ಷಮೆ ಕೇಳಿದ್ದಾರೆ.