ಲಖನೌ(ಉತ್ತರ ಪ್ರದೇಶ):ಲೋಕಸಭೆ ಚುನಾವಣೆ 2024ರ ಹಿನ್ನಡೆಯ ನಂತರ ಉತ್ತರ ಪ್ರದೇಶ ಸರ್ಕಾರ ಮತ್ತು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ 'ಸರ್ಕಾರಕ್ಕಿಂತ ಪಕ್ಷ ದೊಡ್ಡದು' ಎಂದು ಬುಧವಾರ ಬಹಿರಂಗವಾಗಿಯೇ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಅವರು ಈ ಮಾರ್ಮಿಕ ಪೋಸ್ಟ್ ಹಾಕಿದ್ದು, ಯುಪಿ ಬಿಜೆಪಿಯಲ್ಲಿ ಬಿರುಕಿನ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.
ಲಖನೌದಲ್ಲಿ ಭಾನುವಾರ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೌರ್ಯ ಭಾಷಣ ಮಾಡಿದ್ದರು. ಆ ಬಳಿಕ 'ಪಕ್ಷಕ್ಕಿಂತ ಸರ್ಕಾರ ದೊಡ್ಡದಲ್ಲ' ಎಂಬರ್ಥದ ಆಯ್ದ ಭಾಗವನ್ನು ಬುಧವಾರ ಪೋಸ್ಟ್ ಮಾಡಿದ್ದಾರೆ. 'ಸರ್ಕಾರಕ್ಕಿಂತ ಸಂಘಟನೆ ದೊಡ್ಡದು, ಕಾರ್ಯಕರ್ತರ ನೋವು, ನನ್ನ ನೋವು. ಸಂಘಟನೆಗಿಂತ ಯಾರೂ ದೊಡ್ಡವರಲ್ಲ, ಕಾರ್ಯಕರ್ತರೇ ನಮ್ಮ ಹೆಮ್ಮೆ' ಎಂದಿದ್ದಾರೆ.
ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ್ದ ಮೌರ್ಯ, ''ಸಂಘಟನೆ ಸರ್ಕಾರಕ್ಕಿಂತ ದೊಡ್ಡದು. ಅದು ಯಾವಾಗಲೂ ದೊಡ್ಡದಾಗಿಯೇ ಇರುತ್ತದೆ. 7 ಕಾಳಿದಾಸ್ ಮಾರ್ಗದಲ್ಲಿರುವ ನನ್ನ ನಿವಾಸದ ಬಾಗಿಲು ಎಲ್ಲರಿಗೂ ತೆರೆದಿದೆ. ನಾನು ಮೊದಲು ಕಾರ್ಯಕರ್ತ, ನಂತರ ಉಪಮುಖ್ಯಮಂತ್ರಿ" ಎಂದು ಹೇಳಿದ್ದರು. ಅಷ್ಟೇ ಅಲ್ಲ, ''ಎಲ್ಲ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರನ್ನು ಗೌರವಿಸಬೇಕು'' ಎಂದೂ ಹೇಳಿದ್ದರು.
ನಡ್ಡಾ ಭೇಟಿಯಾದ ಮೌರ್ಯ, ರಾಜ್ಯಾಧ್ಯಕ್ಷ ಸಿಂಗ್: ಇದರ ಮಧ್ಯೆ, ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮೌರ್ಯ ಮತ್ತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಪ್ರತ್ಯೇಕವಾಗಿ ಮಂಗಳವಾರ ಭೇಟಿ ಮಾಡಿದ್ದಾರೆ. ಇದಾದ ಮರುದಿನವೇ ಈ ಪೋಸ್ಟ್ ಬಂದಿರುವುದು ಗಮನಾರ್ಹ.
ಮೋದಿಗೆ ದೂರು:ಅಷ್ಟೇ ಅಲ್ಲ, ಭೂಪೇಂದ್ರ ಸಿಂಗ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಪಕ್ಷ ಸಂಘಟನೆಯ ವಿಷಯಗಳಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮೋದಿಗೆ ಭೂಪೇಂದ್ರ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.