ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಜಮ್ಮುವಿನಿಂದ ಚೆನಾಬ್ ನದಿಯಲ್ಲಿ ಪಾಕಿಸ್ತಾನಕ್ಕೆ ಕೊಚ್ಚಿ ಹೋಗಿದ್ದ ಯುವಕನ ಮೃತದೇಹವನ್ನು ಪಾಕಿಸ್ತಾನದ ಅಧಿಕಾರಿಗಳು ಯುವಕನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಭಾರತ-ಪಾಕ್ ಗಡಿಯಲ್ಲಿನ ಔಟ್ಪೋಸ್ಟ್ ಸುಚೇತಘರ್ನಲ್ಲಿ ಬಿಎಸ್‌ಎಫ್ ಮತ್ತು ಪೊಲೀಸರ ಸಮ್ಮುಖದಲ್ಲಿ ಮೃತದೇಹವನ್ನು ಹಸ್ತಾಂತರಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.
ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಜಮ್ಮು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ ಅಖ್ನೂರ್‌ನ ಜುರಿಯನ್ ಪ್ರದೇಶದ ನಿವಾಸಿ ಹರಶ್ ನಗೋತ್ರಾ ಚೆನಾಬ್ ನದಿಗೆ ಹಾರಿದ್ದರು. ಬಳಿಕ ಪಾಕಿಸ್ತಾನಕ್ಕೆ ಕೊಚ್ಚಿ ಹೋಗಿ ಜೂನ್ 11ರಂದು ಶವವಾಗಿ ಪತ್ತೆಯಾಗಿದ್ದರು.
ನದಿ ದಡದಲ್ಲಿ ಅವರ ಬೈಕ್ ಪತ್ತೆಯಾಗಿತ್ತು. ಮರುದಿನ ಕುಟುಂಬಸ್ಥರು ಹರಶ್ ಕಾಣೆಯಾದ ಬಗ್ಗೆ ಜುರಿಯನ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಖೌರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 80 ಸಾವಿರ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದರಿಂದ ಅವರು ನದಿಗೆ ಹಾರಿದ್ದರು ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದರು.
ಘಟನೆಯ ಬಳಿಕ ಹರಶ್ ಬಳಸುತ್ತಿದ್ದ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ, ಅದೇ ನಂಬರ್ ಅನ್ನು ಅವರ ತಂದೆ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ನದಿಗೆ ಹಾರುವಾಗ ಹರಶ್ ಕೊರಳಲ್ಲಿ ಐ-ಕಾರ್ಡ್ ಹಾಕಿಕೊಂಡಿದ್ದ. ಈ ಕಾರ್ಡ್ನಲ್ಲಿ ಮೊಬೈಲ್ ಫೋನ್ ನಂಬರ್ ಇತ್ತು. ಪಾಕಿಸ್ತಾನದ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಹಲವು ಬಾರಿ ಈ ನಂಬರ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಸ್ವಿಚ್ ಆಫ್ ಆಗಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಿಯಾಲ್‌ಕೋಟ್‌ನಲ್ಲಿ ಮಣ್ಣು ಮಾಡಲಾಗಿತ್ತು. ಪಾಕಿಸ್ತಾನಿ ಅಧಿಕಾರಿಯೊಬ್ಬರು ಹರಶ್ ತಂದೆ ಸುಭಾಷ್ ಶರ್ಮಾ ಅವರ ವಾಟ್ಸ್‌ಆ್ಯಪ್ ನಂಬರ್ಗೆ ಶವ ಪತ್ತೆಯಾಗಿರುವ ಬಗ್ಗೆ ಸಂದೇಶ ರವಾನಿಸಿದ್ದರು. ಆ ಬಳಿಕ ಕುಟುಂಬಸ್ಥರಿಗೆ ವಿಷಯ ಗೊತ್ತಾಗಿತ್ತು. ಮೃತದೇಹವನ್ನು ತವರಿಗೆ ತರಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದರು.
ಹರಶ್ ಮೃತದೇಹವನ್ನು ಸ್ವದೇಶಕ್ಕೆ ತರುವಂತೆ ಕುಟುಂಬಸ್ಥರು, ಪ್ರಧಾನಿ ಕಚೇರಿ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ''ನನ್ನ ಮಗನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ತವರಿಗೆ ತರಲು ನಮಗೆ ಸಹಾಯ ಮಾಡುವಂತೆ ನಮ್ಮ ಪ್ರಧಾನ ಮಂತ್ರಿಯನ್ನು ವಿನಂತಿಸುತ್ತೇವೆ. ನಮ್ಮ ಧರ್ಮದ ಪ್ರಕಾರ ಮಗನ ಅಂತ್ಯಕ್ರಿಯೆಯನ್ನು ಮಾಡಲು ನಾವು ಬಯಸುತ್ತೇವೆ'' ಎಂದು ತಂದೆ ಸುಭಾಷ್ ಶರ್ಮಾ ಹೇಳಿದ್ದರು. ಇದೇ ವೇಳೆ, ಮೃತದೇಹವನ್ನು ಆದಷ್ಟು ಬೇಗ ತವರಿಗೆ ತರುವ ಕುರಿತು ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ಮಾತನಾಡಲು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನೂ ಓದಿ:ನದಿಗೆ ಹಾರಿದ್ದ ಜಮ್ಮು ಯುವಕ ಪಾಕಿಸ್ತಾನದಲ್ಲಿ ಮಣ್ಣಾದ! - JAMMU YOUTHS BODY IN PAKISTAN